ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣವೊಂದು ತನಿಖೆ ವೇಳೆ ಕೊಲೆ (Murder Case) ಎಂಬುದು ತಿಳಿದು ಬಂದಿದೆ. ಪರಪ್ಪನ ಅಗ್ರಹಾರದ ಕೂಡ್ಲು ಶಿವ ದೇವಾಲಯದ ನಂಜಾರೆಡ್ಡಿ ಲೇಔಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿಯೊಬ್ಬ ಕಥೆ ಕಟ್ಟಿದ್ದ. ಪೊಲೀಸರು ಕೂಡ ಅಸಹಜ ಸಾವೆಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಸಾವಿನ ರಹಸ್ಯ ಬಯಲಾಗಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಅನುರಾಧ ಅಲಿಯಾಸ್ ಅಲೀಮಾ (31) ಹತ್ಯೆಯಾದವಳು. ರಾಜಶೇಖರ್ ಕೊಲೆ ಆರೋಪಿಯಾಗಿದ್ದಾನೆ. ಅನುರಾಧ ರಾಜಶೇಖರ್ ಜತೆ ಎರಡನೇ ಮದುವೆಯಾಗಿದ್ದಳು. ಮೊದಮೊದಲು ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ ಈ ನಡುವೆ ರಾಜಶೇಖರ್ ಬೇರೊಬ್ಬ ಮಹಿಳೆ ಜತೆಗೆ ಸಂಪರ್ಕ ಹೊಂದಿದ್ದ. ಇದೇ ವಿಚಾರಕ್ಕೆ ಅನುರಾಧ ಹಾಗೂ ರಾಜಶೇಖರ್ ನಡುವೆ ಗಲಾಟೆ ನಡೆಯುತ್ತಲೆ ಇತ್ತು.
ಹತ್ಯೆ ದಿನವು ಅನುರಾಧ ಹಾಗೂ ರಾಜಶೇಖರ್ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ರಾಜಶೇಖರ್ ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಬಳಿಕ ಅನುರಾಧಳನ್ನು ಆಸ್ಪತ್ರೆಗೂ ದಾಖಲು ಮಾಡಿದ್ದ.
ಇದನ್ನೂ ಓದಿ: Neymar: ಫುಟ್ಬಾಲ್ ಆಟಗಾರ ನೇಯ್ಮರ್ ಗೆಳತಿ, ಮಗುವನ್ನು ಅಪಹರಿಸಲು ಯತ್ನ
ಮಾತ್ರವಲ್ಲ ಅನುಮಾನ ಬಾರದೆ ಇರಲಿ ಎಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದ. ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ರಹಸ್ಯ ಹೊರಬಂದಿದೆ. ಬಲವಂತವಾಗಿ ಕುತ್ತಿಗೆ ಹಿಸುಕಿರುವುದು ಬೆಳಕಿಗೆ ಬಂದಿದೆ.
ಕೂಡಲೇ ರಾಜಶೇಖರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆತ್ಮಹತ್ಯೆ ಬದಲಿಗೆ ಕೊಲೆ ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ, ಟೀ ಕುಡಿಯಲು ಬಂದವನ ಕೊಚ್ಚಿ ಕೊಂದರು
ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಬ್ಬ ರೌಡ್ಶೀಟರ್ನ (Rowdy sheeter murder) ಬರ್ಬರ ಕೊಲೆಯಾಗಿದೆ (Murder Case). ರಾತ್ರಿ ಟೀ ಕುಡಿಯಲು ಬಂದಿದ್ದವನನ್ನು ಕೊಚ್ಚಿ ಕೊಂದು ಹಂತಕರು ಪರಾರಿಯಾಗಿದ್ದಾರೆ.
ಕೊಲೆಯಾದ ರೌಡಿಶೀಟರ್ನನ್ನು ಸಹದೇವ್ ಎಂದು ಗುರುತಿಸಲಾಗಿದೆ. ಕೋಣನಕುಂಟೆ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಸಹದೇವನನ್ನು ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ರಾತ್ರಿ 9:30 ಸುಮಾರಿಗೆ ಘಟನೆ ನಡೆದಿದೆ. ಟೀ ಕುಡಿಯಲು ಬೇಕರಿ ಬಳಿ ಬಂದಿದ್ದ ರೌಡಿಶೀಟರ್ ಸಹದೇವನನ್ನು ಮೂರು ಬೈಕ್ನಲ್ಲಿ ಬಂದಿದ್ದ ಆರು ಮಂದಿ ಹಂತಕರು ಸುತ್ತುವರಿದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪುಟ್ಟೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಹಂತಕರಿಗಾಗಿ ಬಲೆ ಬೀಸಿದ್ದಾರೆ. ಇತ್ತೀಚೆಗೆ ಸಿದ್ಧಾಪುರ ಮಹೇಶ್ ಎಂಬ ರೌಡಿಶೀಟರ್ನನ್ನು ಜೈಲಿನಿಂದ ಹೊರಬರುತ್ತಲೇ ಕೊಚ್ಚಿ ಕೊಲೆ ಮಾಡಲಾಗಿತ್ತು. ರಾಮನಗರದಲ್ಲೂ ಒಬ್ಬ ರೌಡಿಶೀಟರ್ ಕೊಲೆಯಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ