ಚಿಕ್ಕಮಗಳೂರು : ಇಲ್ಲಿನ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹತ್ಯೆ (murder case) ಮಾಡಿದ್ದಾನೆ. ಪದ್ಮಾಕ್ಷಿ (40) ಮೃತ ದುರ್ದೈವಿ.
ಕುಡಿದ ಮತ್ತಿನಲ್ಲಿ ಮನೆಗೆ ಬಂದ ಪತಿಯನ್ನು ಪದ್ಮಾಕ್ಷಿ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು ಮಾತಿಗೆ ಮಾತು ಬೆಳೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕುಡುಕ ಪತಿ ಮನೆಯಲ್ಲಿದ್ದ ಕೊಡಲಿಯಿಂದ ಪದ್ಮಾಕ್ಷಿಗೆ ಹೊಡೆದಿದ್ದಾನೆ. ಬಳಿಕ ಮನೆಯಿಂದ ಹೊರ ತಳ್ಳಿದ್ದಾನೆ.
ಇದನ್ನೂ ಓದಿ: Physical assualt : ಅಣ್ಣ ಕರೀತಾನೆ ಎಂದು ಹೇಳಿ ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್ ; ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಪತ್ನಿಯನ್ನು ಹೊರಹಾಕಿದ ಬಳಿಕ ಮನೆಯೊಳಗೆ ಮಲಗಿದ್ದಾನೆ. ಆದರೆ ಕೊಡಲಿಯಿಂದ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಪದ್ಮಾಕ್ಷಿ, ರಾತ್ರಿ ಎಲ್ಲ ಒದ್ದಾಡಿ ಬೆಳಗಾಗುವುದರಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಕುಡಿಯುವ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಇದೀಗ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.
ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಗೋಣಿಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಹೊರಗೆ ಬಿದ್ದಿದ್ದ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ