ಬೆಂಗಳೂರು: ಇಲ್ಲಿನ ಬಾಗಲೂರು ಪೊಲೀಸರು ಫ್ರೀ ಪ್ಲ್ಯಾನ್ ಮರ್ಡರ್ ಕೇಸ್‌ವೊಂದನ್ನು (Attempt Murder case) ಪತ್ತೆ ಹಚ್ಚಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಮೊದಮೊದಲು ಇದೊಂದು ಅಪಘಾತ ಪ್ರಕರಣ (road accident) ಎಂದುಕೊಂಡು ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಅಸಲಿ ಸಂಗತಿಯನ್ನು ಹೊರಗೆಳೆದಿದ್ದಾರೆ.
ಒಂದೂವರೆ ವರ್ಷದ ಹಿಂದೆ ಅರವಿಂದ್ ಎಂಬಾತ ಚೈತನ್ಯಳನ್ನು ಮದುವೆ ಆಗಿದ್ದ. ಈ ನಡುವೆ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇತ್ತ ತನ್ನ ತಂದೆ ತಾಯಿಯನ್ನು ಚೈತನ್ಯ ದೂರ ಮಾಡಿದ್ದಾಳೆಂದು ಅರವಿಂದ್ ಭಾವಿಸಿದ್ದ. ಹೀಗಾಗಿ ಚೈತನ್ಯಳಿಂದ ದೂರವಾಗಲು ಬಯಸಿ, ಡಿವೋರ್ಸ್ ನೀಡುವಂತೆ ಪೀಡಿಸುತ್ತಿದ್ದ. ಆದರೆ ಚೈತನ್ಯ ವಿಚ್ಛೇದನ ನೀಡಲು ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಅರವಿಂದ್ ಚೈತನ್ಯಳನ್ನು ಹತ್ಯೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದ.
ಹೆಂಗಸರೆಲ್ಲ ಒಂದೇ ಎಂದು ಹಂತಕನಿಗೆ ಕೈ ಜೋಡಿಸಿದ ಡ್ರೈವರ್
ಚೈತನ್ಯ ದೂರವಾಗಲು ಒಪ್ಪದೆ ಇದ್ದಾಗ ಅರವಿಂದ್ ಪತ್ನಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದ. ಹತ್ಯೆ ಮಾಡಿದರೆ ಜೈಲುಪಾಲಾಗುವ ಭೀತಿಗೆ ಅಪಘಾತದ ರೀತಿಯಲ್ಲಿ ಬಿಂಬಿಸಲು ಮುಂದಾಗಿದ್ದ. ಈತನ ಕೃತ್ಯಕ್ಕೆ ಪತ್ನಿಯಿಂದ ವಿರಸಗೊಂಡಿದ್ದ ಮತ್ತೊಬ್ಬ ಸಾಥ್ ನೀಡಿದ್ದ.
ಉದಯ್ ಕುಮಾರ್ ಎಂಬಾತನಿಗೂ ಪತ್ನಿಯ ಜತೆ ಸಂಬಂಧ ಹಾಳಾಗಿತ್ತು. ಹೆಂಗಸರೆಲ್ಲಾ ಒಂದೇ ತರ ಹಿಂಸೆ ನೀಡುತ್ತಾರೆ ಎಂದು ಭಾವಿಸಿದ್ದ. ಹೀಗಾಗಿ ಅರವಿಂದ್ ಜತೆಗೆ ಕೈ ಜೋಡಿಸಲು ಮುಂದಾಗಿದ್ದ. ಚೈತನ್ಯ ಎಲ್ಲಲ್ಲಿ ಓಡಾಡ್ತಾಳೆ, ಎಲ್ಲಿ ಸಿಸಿಟಿವಿ ಇರವುದಿಲ್ಲ ಎಂದೆಲ್ಲ ಗಮನಿಸಿದ್ದರು. ಪತ್ನಿಯನ್ನು ಕೊಲ್ಲಲು ಅರವಿಂದ್ ಹಳೇ ಟಾಟಾ ಸುಮೋ ವಾಹನವನ್ನು ಖರೀದಿ ಮಾಡಿದ್ದ.
ಇದನ್ನೂ ಓದಿ: ಅರಸಿ ಬಂದ ಯುವತಿಯನ್ನು ಪ್ರೀತಿಯಿಂದ ಮನೆಗೆ ಕರೆದೊಯ್ದ ವಿದ್ಯಾರ್ಥಿ; ಸುಟ್ಟು ಕರಕಲಾಯ್ತು ಅವನ ದೇಹ
ಗರ್ಭಿಣಿಯಾಗಿದ್ದವಳ ಪ್ರಾಣ ತೆಗೆಯಲು ಮುಂದಾಗಿದ್ದ ಪತಿ
ಪತ್ನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಿದ್ದರೂ ಅರವಿಂದ್ ಜೀವ ತೆಗೆಯಲು ಮುಂದಾಗಿದ್ದ. ಚೈತನ್ಯ ಭರತನಾಟ್ಯ ಕ್ಲಾಸ್ ಮುಗಿಸಿ ವಾಪಾಸ್ ಬರುವಾಗ ಈ ಉದಯ್ ಕುಮಾರ್ ಟಾಟಾ ಸುಮೋದಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಚೈತನ್ಯಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಅಪಘಾತ ಕೇಸ್ ಎಂದು ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ದೇವನಹಳ್ಳಿ ಪೊಲೀಸರು, ಬಾಗಲೂರು ಪೊಲೀಸರಿಗೆ ಕೇಸ್ ವರ್ಗಾವಣೆ ಮಾಡಿದ್ದರು. ಕಾರು ಯಾರದ್ದು ಎಂದು ಪತ್ತೆ ಹಚ್ಚಿದಾಗ ಅಸಲಿ ಸಂಗತಿ ಹೊರ ಬಿದ್ದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಮಗಳ ಸ್ಥಿತಿಗೆ ಪೋಷಕರ ಕಣ್ಣೀರು
ಅಪಘಾತದಿಂದ ಚೈತನ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಗಂಭೀರ ಗಾಯಗೊಂಡಿರುವ ಚೈತನ್ಯ ಆರೋಗ್ಯ ಇನ್ನು ಸುಧಾರಿಸಿಲ್ಲ. ಕಳೆದ ಆರು ತಿಂಗಳಿಂದ ಹಾಸಿಗೆ ಹಿಡಿದಿರುವ ಮಗಳ ಪರಿಸ್ಥಿತಿಗೆ ಪೋಷಕರು ಕಣ್ಣೀರು ಹಾಕಿದ್ದಾರೆ. ನನ್ನ ಮಗಳನ್ನು ಅರ್ಧ ಜೀವ ಮಾಡಿರುವ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ