Site icon Vistara News

Murder Case: ವರದಕ್ಷಿಣೆಗಾಗಿ ಪತ್ನಿಯ ಕತ್ತು ಸೀಳಿದ ಪಾಪಿ; ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು!

persons dead

ಚಿಕ್ಕಬಳ್ಳಾಪುರ/ಕಲಬುರಗಿ/ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ವರದಕ್ಷಿಣೆಗಾಗಿ (Dowry case) ಪಾಪಿ ಪತಿಯೊಬ್ಬ, ಪತ್ನಿಯ ಕತ್ತು ಸೀಳಿ ಹತ್ಯೆ (Murder Case) ಮಾಡಿದ್ದಾನೆ. ವಿನೋದಮ್ಮ (34)ಮೃತ ದುರ್ದೈವಿ. ಈ ಕೃತ್ಯ ನಡೆಸಿದ ಕೆ ಎಸ್ ಸುರೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಸುರೇಶ್‌ ಹಾಗೂ ಮೃತ ವಿನೋದಮ್ಮ

ಒಂದೇ ಗ್ರಾಮ ನಿವಾಸಿಯಾದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು. 16 ವರ್ಷಗಳ ಹಿಂದೆಯೇ ಅಂತರ್ಜಾತಿ ವಿವಾಹವಾಗಿದ್ದ ಇವರಿಗೆ 14 ವರ್ಷದ ಮಗಳು ಇದ್ದಾಳೆ. ಇತ್ತೀಚೆಗೆ ಸುರೇಶ್‌ ವಿನೋದಮ್ಮಳಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಸುರೇಶ್‌ನನ್ನು ಕೆಂಚಾರ್ಲಹಳ್ಳಿ ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ

ಕಲಬುರಗಿ ನಗರದ ಭರತ ನಗರ ತಾಂಡಾದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ. ಲಕ್ಷ್ಮಣ ಚಹ್ವಾಣ್ (55) ಹತ್ಯೆಯಾದವ. ಲಕ್ಷ್ಮಣ ಚಹ್ವಾಣ್ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮನ ಮಗನ ಮದುವೆ ಸಂಭ್ರಮದಲ್ಲಿದ್ದ ಲಕ್ಷ್ಮಣ ಮಧ್ಯರಾತ್ರಿ ಮೂರು‌ ಗಂಟೆಯವರೆಗೆ ಕುಟುಂಬಸ್ಥರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಆದರೆ ನಸುಕಿನ‌ ಜಾವ ಆರು ಗಂಟೆ ಸುಮಾರಿಗೆ ಲಕ್ಷ್ಮಣ ತಲೆ‌ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಲಕ್ಷ್ಮಣ ಚಹ್ವಾಣ್ ಬರ್ಬರವಾಗಿ ಹತ್ಯೆಯಾದವರು

ಸ್ಥಳಕ್ಕೆ ಎಮ್‌ಬಿ ನಗರ‌ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಎಮ್‌ಬಿ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹತ್ಯೆಗೆ ಕಾರಣವೇನು, ಯಾರು ಹತ್ಯೆ ಮಾಡಿದ್ದು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಕತ್ತು ಸೀಳಿ ಕೂಲಿ ಕಾರ್ಮಿಕನ ಹತ್ಯೆ

ಬೆಂಗಳೂರಿನ ಕೆಆರ್ ರಸ್ತೆಯ ಮೆಟ್ರೋ ಬಳಿ ಇರುವ ಬಸ್ ನಿಲ್ದಾಣದಲ್ಲಿ ಶವವೊಂದು ಪತ್ತೆ ಆಗಿದೆ. ದುಷ್ಕರ್ಮಿಗಳು ವ್ಯಕ್ತಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿ ಆನಂದ್ ಎಂದು ತಿಳಿದು ಬಂದಿದೆ. ಆನಂದ್‌ ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿವಿ ಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೃತ ಆನಂದ್‌

ಇದನ್ನೂ ಓದಿ: Delhi Murder: ಆಕೆಯ ನಿರ್ಲಕ್ಷ್ಯ ಸಹಿಸಲಾಗದೆ ಕೊಂದೆ; ಹಿಂದು ಬಾಲಕಿಯ ಹಂತಕ ಸಾಹಿಲ್ ಹೇಳಿಕೆ​

ಹೇರೋಹಳ್ಳಿ ಕೆರೆಯಲ್ಲಿ ತೇಲಿ ಬಂದ ವ್ಯಕ್ತಿಯ ಶವ

ಹೇರೊಹಳ್ಳಿ ಕೆರೆಯಲ್ಲಿ ತೇಲಿ ಬಂತು ವ್ಯಕ್ತಿಯ ಶವ

ಬೆಂಗಳೂರಿನ ಹೇರೊಹಳ್ಳಿ ಕೆರೆಯಲ್ಲಿ ವ್ಯಕ್ತಿಯ ಶವ ತೇಲಿ ಬಂದಿದೆ. ಮಂಗಳವಾರ ಮುಂಜಾನೆ ವಾಯುವಿಹಾರಿಗಳು ಕೆರೆ ದಂಡೆಯಲ್ಲಿ ವಾಕಿಂಗ್‌ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಂದಾಜು 38-40ವರ್ಷದ ವ್ಯಕ್ತಿಯೆಂದು ಗುರುತಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version