ಹಾವೇರಿ: ಇಲ್ಲಿನ ಸಂಗೂರು ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಚ್ಚಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಕ್ಷಾಯಣಿ (45) ಹತ್ಯೆಯಾದವರು, ಪ್ರಭು ವಾರತಿ (52) ಎಂಬಾತ ಕೊಲೆಗೈದು, ಆತ್ಮಹತ್ಯೆ ಮಾಡಿಕೊಂಡವ.
ಬುಧವಾರ ಈ ಭೀಕರ ಕೃತ್ಯ ನಡೆದಿದ್ದು, ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ. ಇವರಿಬ್ಬರ ನಡುವೆ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇತ್ತು. ಆದರೆ ಈ ಬಾರಿ ಇವರಿಬ್ಬರ ಕಲಹವು ವಿಕೋಪಕ್ಕೆ ತಿರುಗಿ ಪ್ರಭು ಸಿಟ್ಟಿನಿಂದ ಮಚ್ಚಿನಿಂದ ದಾಕ್ಷಾಯಣಿಯ ಕತ್ತಿಗೆ ಬೀಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ದಾಕ್ಷಾಯಣಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಪತ್ನಿ ದಾಕ್ಷಾಯಣಿ ಮೇಲಿನ ಅನುಮಾನಕ್ಕೆ ಆಕೆಯ ಕತ್ತು ಸೀಳಿದ್ದು, ಬಳಿಕ ರಕ್ತಸಿಕ್ತ ಆಗಿದ್ದ ಕೈಗಳಿಂದಲೇ ಮನೆಯ ಮುಂದಿದ್ದ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸಂಶಯ ಪಿಶಾಚಿ ಪತಿಯ ಕ್ರೌರ್ಯಕ್ಕೆ ಬಲಿಯಾದ ಪತ್ನಿ
ಪತ್ನಿಯ ಶೀಲ ಶಂಕಿಸಿ ಪತಿ ಆಕೆಯನ್ನು ಕೊಲೆ ಮಾಡಿದ ಘಟನೆ (murder case) ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಶಿಲ್ಪಾ (27) ಪತಿಯಿಂದ ಕೊಲೆಯಾದ ಮಹಿಳೆ. ಮೃತ ಶಿಲ್ಪಾಳನ್ನು ಕೊಲೆಗೈದ ಪತಿ ಸಿದ್ದು ಎಂಬಾತ. ನಿನ್ನೆ ರಾತ್ರಿ ಈತ ಪತ್ನಿಯ ನಡತೆ ಶಂಕಿಸಿ ಗಲಾಟೆ ಮಾಡಿದ್ದಾನೆ. ನಂತರ ಶಿಲ್ಪಾಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿಲ್ಪಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಸಿದ್ದುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನ ಕೊಲೆ
ಕಲಬುರಗಿ: ಮಾರಕಾಸ್ತ್ರಗಳಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ. ಕಲಬುರಗಿ ನಗರದ ಆಜಾದಪುರ್ ರಸ್ತೆಯಲ್ಲಿ ಘಟನೆ ನಡೆದಿದೆ. ಉಮೇರ್ (23) ಕೊಲೆಯಾದ ಯುವಕ. ಉಮೇರ್, ಕಲಬುರಗಿ ನಗರದ ಬಿಲಾಲಾಬಾದ್ ಕಾಲೋನಿ ನಿವಾಸಿ.
ಇದನ್ನೂ ಓದಿ: Assault Case: ಕುಡಿದು ರಾಜಕೀಯ ಮಾತಾಡಿದ, ಸ್ನೇಹಿತರಿಂದಲೇ ಬುರುಡೆ ಒಡೆಸಿಕೊಂಡ!
ಕಳೆದ ರಾತ್ರಿ ಹನ್ನೊಂದು ಮೂವತ್ತರ ಸಮಯದಲ್ಲಿ ಹಲ್ಲೆ ನಡೆದಿದೆ. ಚಾಕುವಿನಿಂದ ದೇಹದ ವಿವಿಧೆಡೆ ಸಿಕ್ಕಸಿಕ್ಕಂತೆ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಉಮೇರ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಉಮೇರ್ ಮೃತಪಟ್ಟಿದ್ದಾನೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿರುವ ಶಂಕೆಯಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ