Site icon Vistara News

Murder Case : ಪತ್ನಿಯನ್ನು ಜನ ಕಳ್ಳಿ ಎಂದಿದ್ದಕ್ಕೆ ಕೊಂದೇ ಬಿಟ್ಟ!

Husband murder his Wife

ಬೆಂಗಳೂರು: ಆ ದಂಪತಿ ಮಂಗಳೂರು ಮೂಲದವರು. ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದರು. ಪತಿ ಪಾನಿಪುರಿ ಅಂಗಡಿ ನಡೆಸುತ್ತಿದ್ದರೆ, ಪತ್ನಿ ಮನೆಯ ಜವಾಬ್ದಾರಿ ಹೊತ್ತಿದ್ದಳು. ಆದರೆ ಜನರ ಅದೊಂದು ಮಾತಿಗೆ ತಲೆಕೆಡಿಸಿಕೊಂಡ ಪತಿರಾಯ ಪತ್ನಿಯನ್ನೇ ಕೊಂದು (Murder Case) ಬಿಟ್ಟಿದ್ದಾನೆ.

ಸರಿತಾ (35) ಹತ್ಯೆಯಾದ ದುರ್ದೈವಿ. ತಾರಾನಾಥ್ ಕೊಲೆ ಆರೋಪಿ ಆಗಿದ್ದಾನೆ. ಮಂಗಳೂರು ಮೂಲದ ಈ ದಂಪತಿ ವೈಟ್ ಫೀಲ್ಡ್ ಸಮೀಪ ವಾಸವಿದ್ದರು. ಪಾನಿಪುರಿ ಮಾರಿ ಹೇಗೋ ಜೀವನ ನಡೆಸುತ್ತಿದ್ದರು. ಆದರೆ ಈ ನಡುವೆ ಮಂಗಳೂರಿನಲ್ಲಿ ಪತ್ನಿ ಸರಿತಾ ಮೇಲೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಕೆಲವರು ಪತ್ನಿಯನ್ನು ಕಳ್ಳಿ‌ ಕಳ್ಳಿ ಎನ್ನುತ್ತಿದ್ದರು. ಜನರು ಹೀಗೆ ಹೀಯಾಳಿಸುವುದು ಸಹಿಸದೆ ತಾರಾನಾಥ್‌ ಹಗ್ಗದಿಂದ ಪತ್ನಿಯ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ.

ಕೊಲೆ ಆರೋಪಿ ತಾರಾನಾಥ್‌

ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರಿಸಿದ್ದ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೇ ಆತನೇ ಪೊಲೀಸರಿಗೆ ಶರಣಾಗಿದ್ದಾನೆ. ಪತ್ನಿ ಸರಿತಾಳನ್ನು ಈ ಕಾರಣಕ್ಕಾಗಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಸದ್ಯ ವೈಟ್ ಫೀಲ್ಡ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮತ್ತೊಬ್ಬಳನ್ನು ಮೋಹಿಸಿದ ಪತಿರಾಯ; ಬೇಸತ್ತು ವಿಷ ಸೇವಿಸಿದಳು

ಮೈಸೂರು: ಇಲ್ಲಿನ ತಿ.ನರಸೀಪುರ ತಾಲೂಕಿನ ಹನುಮನಹಾಳು ಗ್ರಾಮದಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ (Illicit relationship) ಬೇಸತ್ತು ಗೃಹಿಣಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮನುರಾಣಿ (24) ಮೃತ ದುರ್ದೈವಿ.

ಮೃತ ದುರ್ದೈವಿ ಮನುರಾಣಿ

ಪತಿ ಮಂಜು ಅದೇ ಗ್ರಾಮದ ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ. ಕದ್ದು ಮುಚ್ಚಿ ನಡೆಯುತ್ತಿದ್ದ ಇವರ ಸಂಬಂಧ ಮನುರಾಣಿಗೆ ತಿಳಿದಿತ್ತು. ಬಳಿಕ ಈ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ.

ಮೃತ ಮನುರಾಣಿ ಹಾಗೂ ಪತಿ ಮಂಜು

ಗಲಾಟೆಯು ಅನಂತರ ಗ್ರಾಮದಲ್ಲಿ ರಾಜಿ ಪಂಚಾಯ್ತಿಯನ್ನು ಮಾಡಲಾಗಿತ್ತು. ಆದರೂ ಮಂಜು ತನ್ನ ಚಾಳಿಯನ್ನು ಮುಂದುವರಿಸಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ನಂತರ ಮಂಜ ವರದಕ್ಷಿಣೆಗಾಗಿ ಬೇಡಿಕೆ ಇಡಲಾರಂಭಿಸಿದ್ದ ಎನ್ನಲಾಗಿದೆ. ಈತನ ನಿರಂತರ ಕಾಟಕ್ಕೆ ಬೇಸತ್ತ ಮನುರಾಣಿ ನಿನ್ನೆ ಸೋಮವಾರ ಸಂಜೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅನಾಥವಾದ ಮಕ್ಕಳು

ಮನುರಾಣಿ ಹಾಗೂ ಮಂಜ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಇತ್ತ ಮನುರಾಣಿ ಪೋಷಕರು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿಲ್ಲ. ಆಕೆಯ ಗಂಡನೇ ವಿಷ ಕುಡಿಸಿ ಹತ್ಯೆ‌ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version