ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ಪತಿಯನ್ನೇ ಬರ್ಬರವಾಗಿ ಹತ್ಯೆ (murder case) ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಬಸವ ವೃತ್ತ ಬಳಿ ನಡೆದಿದೆ. ಸುಜಾತಾ ಅಶೋಕ್ ಬಾನೆ (36) ಮೃತ ದುರ್ದೈವಿ ಆಗಿದ್ದು, ಅಶೋಕ್ ಬಾನೆ (42) ಹತ್ಯೆ ಮಾಡಿದ ಆರೋಪಿ ಆಗಿದ್ದಾನೆ.
ಅಶೋಕ್ ಬಾನೆ ಹಾಗೂ ಸುಜಾತಾ ದಂಪತಿ ನಡುವೆ ಮಂಗಳವಾರ (ಮೇ 2) ಬೆಳಗ್ಗೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳ ಅತಿರೇಕಕ್ಕೆ ತಿರುಗಿದ್ದು, ಅಶೋಕ್ ಸಿಟ್ಟಿಗೆದ್ದವನೇ ಅಲ್ಲೇ ಇದ್ದ ಕುಡುಗೋಲಿನಿಂದ ಪತ್ನಿಗೆ ಹಲ್ಲೆ ನಡೆಸಿದ್ದಾನೆ. ಈತನಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಕೊಚ್ಚಿ ಕೊಂದಿದ್ದಾನೆ. ಹತ್ಯೆ ಮಾಡಿ ಬಳಿಕ ಸದಲಗಾ ಪೊಲೀಸ್ ಠಾಣೆಗೆ ಬಂದು ಅಶೋಕ್ ಶರಣಾಗಿದ್ದಾನೆ.
ಇದನ್ನೂ ಓದಿ: Murder Case: ವಿದ್ಯಾರ್ಥಿ ಕೊಲೆ ಕೇಸ್; ಮೂಡಿಗೆರೆಯ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಗಳ ಬಂಧನ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸದಲಗಾ ಪೊಲೀಸರು ಹತ್ಯೆಯಾದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮನೆಯ ಮುಂಭಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹತ್ಯೆ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಜಮಾಯಿಸಿದ್ದರು. ಕೋಪದ ಕೈಗೆ ಬುದ್ಧಿ ಕೊಟ್ಟು ಎಂತಹ ಅಚಾತುರ್ಯ ಮಾಡಿಬಿಟ್ಟ ಎಂದು ಶಪಿಸಿದ್ದಾರೆ.