ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಬರ್ತ್‌ಡೇ ನೆಪದಲ್ಲಿ ಕರೆಸಿಕೊಂಡು ಜತೆಯಲ್ಲೇ ಕೇಕ್ ಕತ್ತರಿಸಿದ. ಕೊನೆಗೆ ಅದೇ ಚಾಕುವಿನಲ್ಲಿ ಕೊರಳು ಕೊಯ್ದು ಕೊಲೆ (Murder Case in bengaluru) ಮಾಡಿದ ಭಯಾನಕ ಘಟನೆಯೊಂದು ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿತ್ತು. ಯುವತಿಗೆ ಬಂದಿದ್ದ ವಾಟ್ಸ್‌ಆ್ಯಪ್ ಮಸೇಜ್‌ಗಳೇ ಹತ್ಯೆಗೆ ಕಾರಣ ಎನ್ನಲಾಗಿದೆ.
ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯಾ (24) ತನ್ನ ದೂರದ ಸಂಬಂಧಿ ಪ್ರಶಾಂತ್ ಎಂಬಾತನನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆದರೆ, ಇತ್ತೀಚೆಗೆ ಪ್ರಶಾಂತ್‌ಗೆ ನವ್ಯಾಳ ಮೇಲೆ ಅನುಮಾನ ಕಾಡಲು ಶುರುವಾಗಿತ್ತು. ಈ ಮಧ್ಯೆ ಕಳೆದ ಮಂಗಳವಾರ (ಏ.11) ನವ್ಯಾಳ ಹುಟ್ಟುಹಬ್ಬ ಇತ್ತು. ಆದರೆ, ಅಂದು ಬ್ಯುಸಿ ಇದ್ದೇನೆಂದು ಹೇಳಿ ಪ್ರಶಾಂತ್ ಆಕೆಯನ್ನು ಭೇಟಿ ಆಗಿರಲಿಲ್ಲ.
ಶುಕ್ರವಾರ (ಏ.14) ರಾತ್ರಿ ನವ್ಯಾಳಿಗೆ ಸರ್ಪ್ರೈಸ್ ಕೊಡುವ ಉದ್ದೇಶದಿಂದ ಇಡೀ ಕೋಣೆಯನ್ನು ಹುಟ್ಟುಹಬ್ಬಕ್ಕಾಗಿ ಅಲಂಕರಿಸಿದ್ದ. ಇಬ್ಬರು ಖುಷಿ ಖುಷಿಯಾಗಿಯೇ ಬರ್ತ್‌ಡೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಬಳಿಕ ಇಬ್ಬರು ರೂಂನಲ್ಲಿ ಸಂತೋಷದಿಂದ ಕಾಲಕಳೆದಿದ್ದರು.
ಈ ವೇಳೆ ನವ್ಯಾ ಬಾತ್ ರೂಂಗೆಂದು ಹೋದಾಗ, ಆಕೆಯ ಮೊಬೈಲ್‌ಗೆ ಬರ್ತ್‌ಡೇಗೆ ವಿಶ್ ಮಾಡಿರುವ ಮೆಸೇಜ್‌ಗಳು ಬಂದಿತ್ತು. ಆ ಮೆಸೇಜ್‌ಗಳನ್ನು ತೋರಿಸುವಂತೆ ಪ್ರಶಾಂತ್ ಕೇಳಿದ್ದ. ಆದರೆ ನವ್ಯಾ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೋಪಗೊಂಡ ಪ್ರಶಾಂತ್ ಅಲ್ಲೇ ಇದ್ದ ಹರಿತವಾದ ಚಾಕುವಿನಿಂದ ನವ್ಯಾಳ ಕುತ್ತಿಗೆ ಕೊಯ್ತು ಹತ್ಯೆಗೈದಿದ್ದಾನೆ.
ಬಳಿಕ ರಾತ್ರಿ 9 ಗಂಟೆವರೆಗೂ ಗಾಬರಿಯಲ್ಲಿಯೇ ಮೃತದೇಹದೊಂದಿಗೆ ಕಾಲ ಕಳೆದಿದ್ದ ಪ್ರಶಾಂತ್, ಏನೇ ಮಾಡಿದ್ದರೂ ಸಿಕ್ಕಿ ಹಾಕಿಕೊಳ್ಳುವ ಭೀತಿಯಲ್ಲಿ ನೇರವಾಗಿ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನೂ ಓದಿ: Murder case : ಬರ್ತ್ ಡೇ ಕೇಕ್ ಕತ್ತರಿಸಿದ ಬಳಿಕ ಪ್ರೇಯಸಿಯ ಕೊರಳು ಕತ್ತರಿಸಿ ಕೊಂದ ಕ್ರೂರ ಪ್ರೇಮಿ
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಹಂತಕ ಪ್ರಶಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇತ್ತೀಚೆಗೆ ನವ್ಯ ನನ್ನ ಅವಾಯ್ಡ್ ಮಾಡುತ್ತಿದ್ದಳು. ಹೀಗಾಗಿ ಹತ್ಯೆ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.