ತುಮಕೂರು: ಆಸ್ತಿ ವಿಚಾರಕ್ಕೆ ಮಹಿಳೆಯೊಬ್ಬರ ಪ್ರಾಣಪಕ್ಷಿಯೇ ಹಾರಿಹೋಗಿದೆ. ಶಿವಮ್ಮ (65) ಹತ್ಯೆಯಾದವರು. ನಂದೀಶ್ ಎಂಬಾತನೊಂದಿಗೆ ಆಸ್ತಿ ವಿಚಾರಕ್ಕೆ ಶಿವಮ್ಮ ಕಿತ್ತಾಡಿಕೊಂಡಿದ್ದು, ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ದಂಡಿನಶಿವರ ಬಳಿಯಿರುವ ಡಿ.ಪಾಳ್ಯದಲ್ಲಿ ಘಟನೆ ನಡೆದಿದೆ.
ಆರೋಪಿ ನಂದೀಶ್ ಹಾಗೂ ಶಿವಮ್ಮ ನಡುವೆ ಹಲವು ವರ್ಷಗಳಿಂದ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಶನಿವಾರ (ಅ.7) ಇದೇ ವಿಚಾರ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟ ನಂದೀಶ್ ಶಿವಮ್ಮನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ರಕ್ತದ ಮಡುವಿನಲ್ಲೇ ಬಿದ್ದು ಒದ್ದಾಡಿದ ಶಿವಮ್ಮ ಸ್ಥಳದಲ್ಲೇ ಅಸುನೀಗಿದ್ದಾಳೆ. ಹತ್ಯೆ ಬಳಿಕ ಆರೋಪಿ ನಂದೀಶ್ ತಾನೇ ದಂಡಿನಶಿವರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಹತ್ಯೆ ನಡೆದ ಸ್ಥಳಕ್ಕೆ ದಂಡಿನ ಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Theft Case : ಟೀಯಲ್ಲಿ ನಿದ್ರೆ ಮಾತ್ರೆ ಹಾಕಿ ಚಿನ್ನಾಭರಣ ಲೂಟಿ!
ಪ್ರೀತ್ಸೆ ಎಂದು ಹಿಂದೆ ಬಿದ್ದ; ಒಲ್ಲೆ ಎಂದಿದ್ದಕ್ಕೆ ಮಾನಭಂಗ ಮಾಡಿ ಕೊಂದ!
ಚಿತ್ರದುರ್ಗ: ಇಲ್ಲಿನ ಹುಲ್ಲೂರು ಗ್ರಾಮದಲ್ಲಿ ಯುವಕನ ಪ್ರೀತಿ (Love Case) ತಿರಸ್ಕರಿಸಿದ ಯುವತಿಯ (Murder Case) ಕೊಲೆಯಾಗಿದೆ. ಅರ್ಪಿತಾ (19) ಮೃತ ದುರ್ದೈವಿ.
ಅತ್ಯಾಚಾರ ಎಸಗಿ ಅರ್ಪಿತಾಳನ್ನು ಹತ್ಯೆ ಮಾಡಲಾಗಿದೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ಹುಲ್ಲೂರಿನ ಹನುಂತಪ್ಪನ ಎಂಬವರ ಪುತ್ರಿ ಅರ್ಪಿತಾಳ ಹಿಂದೆ ಅದೇ ಗ್ರಾಮದ ಅಜಯ್ @ ಅಜ್ಜಗ ಹಿಂದೆ ಬಿದ್ದಿದ್ದ.
ಅಜಯ್ ಕಳೆದ ಎರಡು ವರ್ಷದಿಂದ ಪ್ರೀತಿಸುವಂತೆ ಅರ್ಪಿತಾಳ ಪೀಡಿಸುತ್ತಿದ್ದ. ಆದರೆ ಅರ್ಪಿತಾ ಆತನ ಪ್ರೀತಿಯ ಬಲೆಗೆ ಬೀಳದೆ ಡಿಪ್ಲೋಮಾ ಮುಗಿಸಿ ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಅಜಯ್ ಕರೆ ಮಾಡಿ ಅರ್ಪಿತಳನ್ನು ಊರಿಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ಇಬ್ಬರ ಭೇಟಿ ವೇಳೆ ಮತ್ತೆ ಪ್ರೀತಿ ವಿಷಯ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಅಜಯ್ ಮದುವೆ ಬಗ್ಗೆಯೂ ಪ್ರಸ್ತಾಪಿಸಿದ್ದ ಎನ್ನಲಾಗಿದೆ. ಮದುವೆಗೆ ಅರ್ಪಿತಾ ಒಪ್ಪದೆ ಇದ್ದಾಗ ಅತ್ಯಾಚಾರ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆಯಿಂದ ಗಾಯಗೊಂಡಿದ್ದ ಅರ್ಪಿತಾಳನ್ನು ಸ್ವತಃ ಅಜಯ್ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಇದನ್ನೂ ಓದಿ: Murder Case : ವ್ಯಕ್ತಿಯನ್ನು ಕೊಂದು ಚೀಲದಲ್ಲಿ ತುಂಬಿ ಕೃಷ್ಣಾ ನದಿಗೆ ಬಿಸಾಕಿದ ಹಂತಕರು!
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯ ಎಸ್.ಎಸ್ ಆಸ್ಪತ್ರೆ ಬಳಿಕ ಶಿವಮೊಗ್ಗ ನ್ಯೂರೋ ಭಾರತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಕೊನೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅರ್ಪಿತಾಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರ್ಪಿತಾ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಅರ್ಪಿತಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮನೆ ಖಾಲಿ ಆರೋಪಿ ಪರಾರಿ
ಯುವತಿ ಇನ್ನಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಅಜಯ್ ಹಾಗೂ ಆತನ ಕುಟುಂಬಸ್ಥರು ಮನೆ ಖಾಲಿ ಮಾಡಿ ಪರಾರಿ ಆಗಿದ್ದಾರೆ. ಆರೋಪಿ ಅಜಯ್‌ಗೆ ಕಠಿಣ ಶಿಕ್ಷೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ