ಆನೇಕಲ್: ಇದು ಸರಿಸುಮಾರು ಎಂಟು ವರ್ಷಗಳ ಹಿಂದಿನ ಅಪರಾಧ ಪ್ರಕರಣ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನ ಮನೆಗೆ ಬಂದ ತಮ್ಮನಿಗೆ ಆಘಾತ ಕಾದಿತ್ತು. ಆಕೆ ಜತೆಗೆ ಮತ್ತೊಬ್ಬ ವ್ಯಕ್ತಿ ವಾಸವಿದ್ದ. ಇದು ಆತನ ತಕರಾರಿಗೆ ಕಾರಣವಾಗಿತ್ತು. ಇದರಿಂದ ರೊಚ್ಚಿಗೆದ್ದ ಅಕ್ಕ ತನ್ನ ಪ್ರಿಯಕರನ ಜತೆಗೂಡಿ ತಮ್ಮನನ್ನು ಕೊಂದು (Murder Case) ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಲ್ಲದೆ, ಕಂಡಕಂಡಲ್ಲಿ ಬಿಸಾಡಿ ಪರಾರಿಯಾಗಿದ್ದಳು. ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.
ಪ್ರಕರಣದ ಬೆನ್ನುಬಿದ್ದಿದ್ದ ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದೇ ರೋಚಕ. ಅಲ್ಲದೆ, ಇಡೀ ಪ್ರಕರಣದ ಒಂದೊಂದೇ ಎಳೆ ಹಿಡಿದು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ನಿಂಗರಾಜು ಸಿದ್ದಪ್ಪ ಪೂಜಾರಿ ಮೃತ ದುರ್ದೈವಿ. ಭಾಗ್ಯಶ್ರೀ ಸಿದ್ದಪ್ಪ ಪೂಜಾರಿ ಹಾಗೂ ಸುಪುತ್ರ ಶಂಕರಪ್ಪ ತಳವಾರ ಬಂಧಿತ ಆರೋಪಿಗಳಾಗಿದ್ದಾರೆ.
ಏನಿದು ಪ್ರಕರಣ?
ಅದು 2015ರ ಆಗಸ್ಟ್ 11ರಲ್ಲಿ ನಡೆದಿದ್ದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣವಾಗಿತ್ತು. ಆಗಸ್ಟ್ 11ರಂದು ಹೋಟೆಲ್ ವಿ-ಇನ್ ಹಿಂಭಾಗದಲ್ಲಿರುವ ಕೆಐಎಡಿಬಿಗೆ ಸೇರಿದ ಖಾಲಿ ಜಾಗದಲ್ಲಿ ಗಿಡಗಳ ಮಧ್ಯದಲ್ಲಿ ರಕ್ತದ ಕಲೆ ಇರುವ ಬ್ಯಾಗ್‌ವೊಂದು ಬಿದ್ದಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆಗೆ ಹೋದಾಗ ಪೊಲೀಸರಿಗೆ ಫ್ಲೆಕ್ಸ್ ಬ್ಯಾನರ್‌ನಿಂದ ಮುಚ್ಚಿದ್ದ ಬ್ಯಾಗ್‌ನೊಳಗೆ ಪ್ಲಾಸ್ಟಿಕ್ ಕವರ್‌ವೊಂದರಲ್ಲಿ ತುಂಡು ತುಂಡಾಗಿ ಕತ್ತರಿಸಿದ್ದ ವ್ಯಕ್ತಿಯೊಬ್ಬನ ಕೈ-ಕಾಲುಗಳು ಹಾಗೂ ಕತ್ತರಿಸಲು ಬಳಸಿದ್ದ ಮಚ್ಚು ಕೂಡ ಪತ್ತೆ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಮತ್ತೆ 4 ದಿನಗಳ ಬಳಿಕ ವಡೇರ ಮಂಚನಹಳ್ಳಿ ಬಳಿ ಇರುವ ಕೆರೆಯಲ್ಲಿ ತಲೆ ಹಾಗೂ ಕೈ-ಕಾಲು ಇಲ್ಲದ ದೇಹ ಪತ್ತೆ ಆಗಿದೆ ಎಂದು ಮತ್ತೊಂದು ದೂರು ಬಂದಿತ್ತು.
ನಂತರ ಹೆಚ್ಚಿನ ತನಿಖೆಗಿಳಿದ ಪೊಲೀಸರಿಗೆ ಖಾಲಿ ಜಾಗದಲ್ಲಿ ಹಾಗೂ ಕೆರೆಯಲ್ಲಿ ಸಿಕ್ಕ ಮೃತದೇಹ ಯಾರದ್ದು ಎಂದು ಪತ್ತೆ ಹೆಚ್ಚಲು ಮುಂದಾದರು. ಈ ವೇಳೆ ಅಂಗಾಂಗ ದೊರೆತ ಜಾಗದಲ್ಲಿ ಪರಿಶೀಲಿಸಿದಾಗ ಬ್ಯಾಗ್ ಅನ್ನು ಮುಚ್ಚಿದ್ದ ಬ್ಯಾನರ್‌ನಲ್ಲಿ ವಡೇರಮಂಚನಹಳ್ಳಿ ಗ್ರಾಮದ ಕ್ಲಿನಿಕ್‌ನ ಪ್ರಿಸ್ಕ್ರಿಪ್ಷನ್ ಚೀಟಿ ದೊರೆತ್ತಿತ್ತು. ಇದರ ಬೆನ್ನಿಗೆ ಬಿದ್ದ ಪೊಲೀಸರು ಕ್ಲಿನಿಕ್‌ನ ಡಾಕ್ಟರ್ ಅನ್ನು ವಿಚಾರಿಸಿದಾಗ ಪ್ರಿಸ್ಕ್ರಿಪ್ಷನ್ ಚೀಟಿಯಲ್ಲಿದ್ದ ಹೆಸರಿನವರು ಅಲ್ಲಿಯೇ ಆಸುಪಾಸಿನಲ್ಲಿ ವಾಸವಾಗಿದ್ದಾಗಿ ತಿಳಿಸಿದ್ದಾರೆ.
ಒಂದೇ ಮನೆಯಲ್ಲಿ ವಾಸ
ಸುಪುತ್ರ ಶಂಕ್ರಪ್ಪ ತಳವಾರ, ಭಾಗ್ಯಶ್ರೀ ಸಿದ್ದಪ್ಪ ಪೂಜಾರಿ ಒಂದೇ ಮನೆಯಲ್ಲಿ ವಾಸವಿದ್ದರು. ಈ ವಿಚಾರ ಗೊತ್ತಿಲ್ಲ ಭಾಗ್ಯಶ್ರೀ ತಮ್ಮ ನಿಂಗರಾಜು ಸಿದ್ದಪ್ಪ ಪೂಜಾರಿ ಅವರ ಮನೆಗೆ ಬಂದಿದ್ದಾನೆ. ಆಗ ಅಕ್ಕನ ವಿಷಯ ತಿಳಿದು ಕೋಪಗೊಂಡಿದ್ದಾನೆ. ಈ ವೇಳೆ ಕೊಲೆಯಾಗಿದೆ.
ವಿಚಾರಣೆ ವೇಳೆ ಬೆಳಕಿಗೆ
ವೈದ್ಯರ ಮಾಹಿತಿ ಮೇರೆಗೆ ಜಿಗಣಿಯ ವಡೇರಮಂಚನಹಳ್ಳಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಭಾಗ್ಯಶ್ರೀ ಹಾಗೂ ಸುಪುತ್ರ ಶಂಕ್ರಪ್ಪ ಇಬ್ಬರೂ ಯಜಾಕಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವುದು ತಿಳಿದು ಬಂದಿದೆ. ಅಲ್ಲದೆ, ಸುಮಾರು ದಿನಗಳಿಂದ ಇವರು ಕೆಲಸಕ್ಕೂ ಬಂದಿಲ್ಲ, ಮನೆಯಲ್ಲೂ ಇಲ್ಲದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಮನೆಯೊಳಗೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಕಂಡು ಬಂದಿತ್ತು.
ಸ್ವಂತ ಊರಿಗೆ ಭೇಟಿ
ಬಳಿಕ ಈ ಮೂವರ ಸ್ವಂತ ಊರಿನ ಬಗ್ಗೆ ವಿಚಾರ ತಿಳಿದು ಅಲ್ಲಿಗೂ ಪೊಲೀಸರ ತಂಡ ಹೋಗಿದೆ. ಅಲ್ಲಿ ವಿಚಾರಿಸಿದಾಗ ವಿಜಯಪುರದ ಸಿಂದಗಿ ತಾಲೂಕಿನ ಸಾನಲಾಳು ಗ್ರಾಮದ ನಿವಾಸಿ ಆಗಿರುವ ಸುಪುತ್ರ ಶಂಕ್ರಪ್ಪ ತಳವಾರ ಮದುವೆ ಆಗಿ ಹೆಂಡತಿಯನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದ ಎಂದು ತಿಳಿದು ಬಂದಿತ್ತು. ಭಾಗ್ಯಶ್ರೀ ಮತ್ತು ನಿಂಗರಾಜು ಇಬ್ಬರು ಇಂಡಿ ತಾಲೂಕಿನ ದೇವಣಗಾಂವ ಗ್ರಾಮದ ನಿವಾಸಿಗಳಾಗಿದ್ದು, ಅಕ್ಕ ಮತ್ತು ತಮ್ಮ ಎಂದು ತಿಳಿದು ಬಂದಿತ್ತು.
ಮೃತದೇಹ ಯಾರೆಂದು ತಿಳಿಯಲು ಡಿಎನ್‌ಎ ಮೊರೆ
ಹೀಗೆ ಗ್ರಾಮದ ಕ್ಲಿನಿಕ್ ಪ್ರಿಸ್ಕ್ರಿಪ್ಷನ್ ಚೀಟಿ ಹಿಡಿದು ಹೋದ ಪೊಲೀಸರಿಗೆ ಮೂವರ ಬಗ್ಗೆ ವಿಚಾರ ತಿಳಿಯಿತಾದರೂ ಮೃತನ ಅಂಗಾಂಗಗಳು ಯಾರದ್ದೆಂದು ತಿಳಿದಿರಲಿಲ್ಲ. ಅಂದರೆ ನಿಂಗರಾಜುವಿನದ್ದಾ ಅಲ್ಲವೇ ಶಂಕ್ರಪ್ಪನದ್ದಾ ಎಂಬುದುನ್ನು ಪತ್ತೆ ಹಚ್ಚಲು ಎರಡೂ ಕುಟುಂಬದ ಸದಸ್ಯರನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರು.
ಡಿಎನ್‌ಎ ಪರೀಕ್ಷೆಯಲ್ಲಿ ಮೃತದೇಹವು ನಿಂಗರಾಜು ಸಿದ್ದಪ್ಪ ಪೂಜಾರಿಯದ್ದು ಎಂದು ತಿಳಿದು ಬಂದಿತ್ತು. ನಂತರ ಮೃತ ವ್ಯಕ್ತಿ ನಿಂಗರಾಜು ಹಾಗೂ ಭಾಗ್ಯಶ್ರೀ ಮತ್ತು ಸುಪುತ್ರ ಶಂಕ್ರಪ್ಪ ಅವರ ಮೊಬೈಲ್ ನಂಬರ್‌ನ ಸಿಡಿಆರ್ ಪಡೆದು ಪರಿಶೀಲಿಸಿದಾಗ ಎಲ್ಲ ಮೊಬೈಲ್ ನಂಬರ್‌ಗಳು ಸ್ವಿಚ್ಡ್ ಆಫ್ ಆಗಿರುವುದು ಕಂಡು ಬಂದಿತ್ತು.
ಇವರಿಬ್ಬರು ಪೊಲೀಸರಿಗೆ ಸಿಗಬಾರದೆಂದು ತಮ್ಮ ಫೋನ್ ಹಾಗೂ ದಾಖಲಾತಿಗಳಾದ ಆಧಾರ್ ಕಾರ್ಡ್ ಆಗಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರಗಳನ್ನು ಎಲ್ಲಿಯೂ ಬಳಸಿರಲಿಲ್ಲ. ಆರೋಪಿಗಳು ತಮ್ಮ ಬುದ್ಧಿವಂತಿಕೆಯಿಂದ ತಮ್ಮ ಇರುವಿಕೆಯ ಬಗ್ಗೆ ಯಾರಿಗೂ ತಿಳಿಯದಂತೆ ಪರಾರಿ ಆಗಿದ್ದರು. ಹೀಗಾಗಿ 2015ರಲ್ಲಿ ನಡೆದಿದ್ದ ಈ ಪ್ರಕರಣವನ್ನು ಪೊಲೀಸರು 2018ರಲ್ಲಿ ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ನ್ಯಾಯಾಲಯಕ್ಕೆ ಅಂತಿಮವಾಗಿ “ಸಿ” ರಿಪೋರ್ಟ್ ಸಲ್ಲಿಸಿದ್ದರು.
ಪಟ್ಟುಬಿಡದ ಪೊಲೀಸರು
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಗಣಿ ಠಾಣೆಯ ಇನ್ಸ್‌ಪೆಕ್ಟರ್ ಸುದರ್ಶನ್ ಮತ್ತವರ ತಂಡ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಆಗ 2019-20ರಲ್ಲಿ ಸುಪುತ್ರ ಶಂಕ್ರಪ್ಪ ತಳವಾರನು ಶಂಕರ್ ಎಂಬ ಹೆಸರಿನಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನಾರ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡಿ ಬಿಟ್ಟುಹೋಗಿರುವ ಮಾಹಿತಿಯನ್ನು ಸಂಗ್ರಹಿಸಿದ್ದು, ತಕ್ಷಣ ಅಲ್ಲಿಗೆ ಹೋಗಿ ವಿಚಾರಿಸಿದಾಗ ಶಂಕ್ರಪ್ಪ ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಆಗ ಅಲ್ಲಿಗೂ ತೆರಳಿದ ಪೊಲೀಸರು ಮೊದಲು ಶಂಕ್ರಪ್ಪನನ್ನು ಬಂಧಿಸಿದ್ದಾರೆ. ಆಗ ಭಾಗ್ಯಶ್ರೀ ರೇವಾ ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದನ್ನು ತಿಳಿದು ಆಕೆಯನ್ನೂ ಬಂಧಿಸಿದ್ದಾರೆ.
ಇದನ್ನೂ ಓದಿ: Sachin Tendulkar: ಏಕದಿನ ಕ್ರಿಕೆಟ್ನಲ್ಲಿ ಬದಲಾವಣೆ ಅಗತ್ಯ; ಸಚಿನ್ ತೆಂಡೂಲ್ಕರ್
ಅಕ್ರಮ ಸಂಬಂಧಕ್ಕೆ ವಿರೋಧ ಮಾಡಿದ್ದ ನಿಂಗರಾಜು
ಅಕ್ಕ ಭಾಗ್ಯಶ್ರೀ ಹಾಗೂ ಸುಪುತ್ರ ಶಂಕ್ರಪ್ಪ ತಳವಾರ ಹಗಲು ರಾತ್ರಿ ಎನ್ನದೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಜತೆಗೆ ಇವರಿಬ್ಬರಿಗೂ ಅಕ್ರಮ ಸಂಬಂಧ ಇರಬಹುದೆಂದು ಅನುಮಾನಿದ್ದ ನಿಂಗರಾಜು, ಇದೇ ವಿಚಾರಕ್ಕೆ ಸುಪುತ್ರನ ಜತೆಗೆ ಜಗಳ ತೆಗೆದಿದ್ದ. ಜಗಳವು ಅತಿರೇಕಕ್ಕೆ ತಿರುಗಿ ಕೊಲೆ ನಡೆದಿದೆ. ಬಳಿಕ ಸುಪುತ್ರ ಹಾಗೂ ಭಾಗ್ಯಶ್ರೀ ಸೇರಿ ನಿಂಗರಾಜು ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಜಾಗದಲ್ಲಿ ಬಿಸಾಡಿ ತಲೆಮರೆಸಿಕೊಂಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ