Site icon Vistara News

Murder Case | ಜಮೀನಿಗಾಗಿ ಯೋಧರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯ

murder case ಹಾಸನದಲ್ಲಿ ಜಮೀನು ವಿಚಾರಕ್ಕೆ ಕೊಲೆ

ಹಾಸನ: ಇಲ್ಲಿನ ಬೇಲೂರು ತಾಲೂಕಿನ ತಿರುಮನಹಳ್ಳಿಯಲ್ಲಿ ಜಮೀನು ವಿಚಾರಕ್ಕೆ ನಡೆದ ಜಗಳವು ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಯೋಧ ಯಶವಂತ್‌ ಎಂಬಾತ ಮೃತ ದುರ್ದೈವಿ.

ಯೋಧರಿಬ್ಬರ ಕುಟುಂಬಗಳ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಆಗಿದ್ದು, ಯೋಧ ಚಂದನ್‌ ಹಾಗೂ ಆತನ ಸಂಬಂಧಿಕರು, ಯಶವಂತ್‌ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡ ಯಶವಂತ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ಯಶವಂತ್‌

ಯೋಧ ಚಂದನ್‌ ಕುಡುಗೋಲಿನಿಂದ ಯಶವಂತ್ ಹಾಗೂ ಆತನ ಸಹೋದರ ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಯಶವಂತ್‌ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಯಶವಂತ್‌ ಸಹೋದರ, ಯೋಧ ಯತೀಶ್ ಕೂಡ ತೀವ್ರ ಗಾಯಗೊಂಡಿದ್ದು, ಅವರಿಗೆ ಖಾಸಗಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಂದನ್ ಮತ್ತು ಯಶವಂತ್‌ ಕುಟುಂಬದ ನಡುವೆ ಜಮೀನು ವಿಷಯಕ್ಕೆ ಈ ಹಿಂದೆಯೂ ಸಾಕಷ್ಟು ಬಾರಿ ಗಲಾಟೆಗಳು ನಡೆದಿದ್ದವು. ಯಶವಂತ್‌ ಜಮೀನಿನ ಸ್ವಲ್ಪ ಜಾಗ ನಮಗೆ ಸೇರಿದ್ದು ಎಂದು ಈ ಹಿಂದೆ ಚಂದನ್ ಕುಟುಂಬ ಗಲಾಟೆ ಮಾಡಿಕೊಂಡಿತ್ತು. ಭಾನುವಾರವೂ ಇದೇ ವಿಚಾರಕ್ಕೆ ತಗಾದೆ ಶುರುವಾಗಿದ್ದು, ಅಜ್ಜಿ ಬಳಿಯಿದ್ದ ಕುಡುಗೋಲು ಕಿತ್ತುಕೊಂಡು ಯೋಧ ಚಂದನ್‌, ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಯೋಧರ ಕುಟುಂಬದ ಜಗಳವು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕುಡುಗೋಲಿನಿಂದ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಚಂದನ್ ಮತ್ತು ಆತನ ಸಹೋದರ ಅಶ್ವಥ್ ಸೇರಿ ಐವರ ವಿರುದ್ಧ ಹಳೇಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Mangalore Blast | ಮಂಗಳೂರಿನ ಆಟೊ ರಿಕ್ಷಾದಲ್ಲಿ ಲಘು ಐಇಡಿ ಬಾಂಬ್‌ ಸ್ಫೋಟ

Exit mobile version