ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಆಪ್ತ, ಬೆಳಗಾವಿಯ ಗ್ರೇಡ್ 2 ತಹಸೀಲ್ದಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಗುರುವಾರ ಬೆಳಗ್ಗೆ ತಹಸೀಲ್ದಾರ್ ಅಶೋಕ್ ಮಣ್ಣೀಕೇರಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ, ಈಗ ಅಶೋಕ್ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕೊಲೆ (Murder Case) ಮಾಡಲಾಗಿದೆ ಎಂದು ಅವರ ಪತ್ನಿ ಹಾಗೂ ಆಕೆಯ ಸಹೋದರನ ಮೇಲೆ ದೂರು ನೀಡಿದ್ದಾರೆ.
ಅಶೋಕ್ ಮಣ್ಣಿಕೇರಿ ಪತ್ನಿ ಭೂಮಿ, ಸಹೋದರ ಸ್ಯಾಮ್ಯುಯೆಲ್ ವಿರುದ್ಧ ಈಗ ಕೊಲೆ ಆರೋಪ ಕೇಳಿಬಂದಿದೆ. ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅಶೋಕ್ ಮಣ್ಣಿಕೇರಿ ಕುಟುಂಬ ವಾಸವಿತ್ತು. ಬುಧವಾರ ತಡ ರಾತ್ರಿ ಹೃದಯಾಘಾತವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಪತ್ನಿ ಕರೆದೊಯ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಶೋಕ್ ಮಣ್ಣಿಕೇರಿ ಮೃತಪಟ್ಟಿದ್ದಾಗಿ ಘೋಷಿಸಲಾಗಿತ್ತು.
ಸಾವಿನ ತನಿಖೆಯಾಗಲಿ: ಕುಟುಂಬಸ್ಥರ ಆಗ್ರಹ
ಅಶೋಕ್ ಮಣ್ಣಿಕೇರಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿಯ ಕ್ಯಾಂಪ್ ಠಾಣೆಗೆ ಅಶೋಕ್ ಮಣ್ಣಿಕೇರಿ ಸಹೋದರಿ ಗಿರಿಜಾ ದೂರು ನೀಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಠಾಣೆ ಎದುರು ಸ್ನೇಹಿತರು, ಸಂಬಂಧಿಕರು ಜಮಾವಣೆಯಾಗಿದ್ದಾರೆ. ಇದೇ ವೇಳೆ ಪೊಲೀಸ್ ಠಾಣೆಗೆ ಅಶೋಕ್ ಪತ್ನಿ ಭೂಮಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯಲ್ ಬಂದಿದ್ದರು. ಈ ವೇಳೆ ಸ್ಯಾಮುಯಲ್ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ. ತಕ್ಷಣ ಅಶೋಕ್ ಪತ್ನಿ ಭೂಮಿ, ಸ್ಯಾಮ್ಯುಯಲ್‌ನನ್ನು ಪೊಲೀಸರು ರಕ್ಷಿಸಿ ಕರೆದೊಯ್ದರು. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Video Viral : ಫ್ರೀ ಬಸ್ ಬಗ್ಗೆ ಉಗಿದು ಉಪ್ಪಿನಕಾಯಿ ಹಾಕಿದ ಮಹಿಳೆ! ಸಿದ್ದರಾಮಯ್ಯಗೆ ಏಕವಚನ ಪ್ರಯೋಗ
ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ
2018ರ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೆದ್ದಾಗ ಅವರಿಗೆ ಅಶೋಕ್ ಮಣ್ಣಿಕೇರಿ ಆಪ್ತ ಸಹಾಯಕರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ನಿಧನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. “ನನ್ನ ಆಪ್ತ ಸಹಾಯಕರಾಗಿದ್ದ ಅಶೋಕ ಮಣ್ಣಿಕೇರಿ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಅಪಾರ ಜ್ಞಾನ, ಅನುಭವವುಳ್ಳ ವ್ಯಕ್ತಿಯನ್ನು ಕಳೆದುಕೊಂಡಿರುವುದು ದೊಡ್ಡ ನಷ್ಟವೆನಿಸುತ್ತಿದೆ. ಈ ಸಮಯದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಸ್ಥರಿಗೆ ಭಗವಂತ ನೋವು ಸಹಿಸುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.