ರಾಯಚೂರು: ತಂಗಿಗೆ ಮೆಸೇಜ್ ಮಾಡಬೇಡ ಎಂದು ಬುದ್ಧಿವಾದ ಹೇಳಲು ಹೋಗಿದ್ದ ಅಣ್ಣನ (Murder Case) ಕೊಲೆಯಾಗಿದೆ. ರಾಯಚೂರಿನ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ದೇವರಾಜ್ (23) ಹತ್ಯೆಯಾದವರು.
ಬಸವರಾಜ್ ಎಂಬಾತ ದೇವರಾಜ್ ತಂಗಿಗೆ ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದ. ಆಕೆಗೆ ಮೆಸೇಜ್ ಮಾಡುವುದು, ಸಿಕ್ಕಸಿಕ್ಕಲ್ಲಿ ಅಡ್ಡ ಹಾಕಿ ಮಾತನಾಡಿಸುವುದನ್ನು ಮಾಡುತ್ತಿದ್ದ. ಹೀಗಾಗಿ ದೇವರಾಜ್ ಕರೆದು ಬುದ್ದಿ ಹೇಳಿ ಬೈದು ಕಳಿಸಿದ್ದ.
ಆದರೆ ಇಷ್ಟಕ್ಕೆ ಸುಮ್ಮನಾಗದ ಬಸವರಾಜ್ ಸೇಡು ತೀರಿಸಿಕೊಳ್ಳಲೆಂದು ತನ್ನ ಸ್ನೇಹಿತ ಲಿಂಗಣ್ಣ ಎಂಬಾತನ ಮೊಬೈಲ್‌ನಿಂದ ಮತ್ತೆ ಯುವತಿಗೆ ಮೇಸೆಜ್ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ದೇವರಾಜ್ ಈ ವಿಚಾರದ ಬಗ್ಗೆ ಮಾತಾನಾಡಲು ಹೋದಾಗ ಬಸವರಾಜ್ ಕಡೆಯವರ ಮಧ್ಯೆ ಗಲಾಟೆ ನಡೆದಿದೆ.
ಈ ಗಲಾಟೆಯಲ್ಲಿ ಬಸವರಾಜ್, ದೇವರಾಜ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಎಂಬಾತನಿಗೂ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ನಡುರಸ್ತೆಯಲ್ಲಿ ಗಂಡನಿಂದ ಚಾಕು ಇರಿತ, ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ಪತ್ನಿಗೆ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದ ಘಟನೆ ನಡೆದಿದೆ. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಗೆ ಪೊಲೀಸರು ತಕ್ಷಣ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ.
ನಿಖಿತಾ (28) ಎಂಬಾಕೆ ಪತಿ ದಿವಾಕರ್ ಎಂಬಾತನಿಂದ ಚಾಕು ಇರಿತಕ್ಕೆ ಒಳಗಾದವರು. ಕಳೆದ ಎರಡು ದಿನಗಳ ಹಿಂದೆ ಪತಿ ಜತೆ ಈಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಲ್ಲಿಸಿ ನಡುರಸ್ತೆಯಲ್ಲಿ ಪತ್ನಿಗೆ ದಿವಾಕರ್ ಐದು ಬಾರಿ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾ ಅವರರನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ನಾಲ್ಕು ಬಾಟಲಿ ರಕ್ತ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: Assault case: ವಿದ್ಯಾರ್ಥಿ ಮೇಲೆ ಲಾಂಗ್ ಬೀಸಿದ ಹೆಲ್ಮೆಟ್‌ಧಾರಿ ಯುವಕರ ಗುಂಪು
ನಿಖಿತಾ ಮತ್ತು ದಿವಾಕರ್ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಕಾರಣ ನಿಖಿತಾ ಪೋಷಕರಿಂದ ದೂರವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರೋಪಿ ಗಂಡ ದಿವಾಕರ್ ಕ್ಷುಲ್ಲಕ ಕಾರಣಕ್ಕೆ ಕಲಹ ತೆಗೆದು ನಿಖಿತಾರನ್ನು ಹಿಂಸಿಸುತ್ತಿದ್ದ ಎಂದು ಗೊತ್ತಾಗಿದೆ. ಸದ್ಯ ಆಸ್ಪತ್ರೆಯಲ್ಲಿರುವ ನಿಖಿತಾರನ್ನು ಬಾಣಸವಾಡಿ ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಬಾಣಸವಾಡಿ ಪೊಲೀಸರು ಆರೋಪಿ ದಿವಾಕರನನ್ನು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ