ಬೆಂಗಳೂರು: ಇಲ್ಲಿನ ರಾಜಾನುಕುಂಟೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಯುವಕನೊಬ್ಬ ಯುವತಿಗೆ ಚಾಕುವಿನಿಂದ (Murder Case) ಇರಿದು ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಆರೋಪಿಯು ಕೆಲ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ಲಯಸ್ಮಿತಾ ಹಾಗೂ ಪವನ್ ಕಲ್ಯಾಣ್ ಇಬ್ಬರು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದು, ದೂರದ ಸಂಬಂಧಿ ಆಗಿದ್ದರಿಂದ ಇಬ್ಬರಿಗೂ ಜಾತಿಯ ಸಮಸ್ಯೆ ಇರಲಿಲ್ಲ. ಹೀಗಾಗಿ ಕುಟುಂಬಸ್ಥರನ್ನು ಒಪ್ಪಿಸುವ ಜವಾಬ್ದಾರಿಯನ್ನು ಲಯಸ್ಮಿತಾ ತೆಗೆದುಕೊಂಡಿದ್ದಳಂತೆ. ಆದರೆ ಕಾಲೇಜಿಗೆ ಸೇರಿದ ಮೇಲೆ ಲಯಾಳ ವರ್ತನೆ ಬದಲಾಗಲು ಶುರುವಾಯಿತಂತೆ.
ಇದರಿಂದ ಆತಂಕಗೊಂಡ ಪವನ್ ಕಲ್ಯಾಣ್ ಲಯಾಸ್ಮಿತಾಳ ಮೇಲೆ ಅನುಮಾನಗೊಂಡು ಕೂಡಲೇ ಮದುವೆ ಮಾಡಿಕೊಳ್ಳೋಣ ಎಂದು ಕೇಳಿದ್ದನಂತೆ. ಮದುವೆ ಎಂದಾಕ್ಷಣ ಲಯ ವಿರೋಧ ಮಾಡಲು ಶುರುಮಾಡಿದ್ದಳಂತೆ. ನಾನು ಈಗಿನ್ನೂ ಕಾಲೇಜಿಗೆ ಸೇರಿದ್ದೀನಿ, ಕಾಲೇಜು ಮುಗಿದ ಮೇಲೆ ಮದುವೆ ಆಗೋಣ ಎಂದು ಸುಮ್ಮನಾಗಿದ್ದಳಂತೆ. ಈ ಘಟನೆ ಬಳಿಕ ಎರಡು ದಿನ ಮಾತನಾಡದೆ ಜತೆಗೆ ಡಿಸೆಂಬರ್ 31 ಮತ್ತು ಜನವರಿ 1ರಂದು ಫೋನ್ ಕಾಲ್ ಪಿಕ್ ಮಾಡಿರಲಿಲ್ಲವಂತೆ.
ಇಬ್ಬರ ವಾಟ್ಸ್ ಆ್ಯಪ್ ಡಿಪಿ ಹಾಕಿದ ಪವನ್
ಹೀಗೆ ಮಾತನಾಡದೆ ಇದ್ದಾಗ ಪವನ್ ತಮ್ಮಿಬ್ಬರ ವಿಚಾರ ಎಲ್ಲರಿಗೂ ತಿಳಿಯಲಿ ಎಂದು ವಾಟ್ಸ್ ಆ್ಯಪ್ನಲ್ಲಿ ಡಿಪಿ ಹಾಕಿದ್ದನಂತೆ. ಈ ವೇಳೆ ಲಯ ಫೋನ್ ಕಾಲ್ ಮಾಡಿ ಬೈದಿದ್ದಳಂತೆ. ಇದರಿಂದ ಸಿಟ್ಟಿಗೆದ್ದ ಪವನ್ ಆಕೆಯನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದನಂತೆ. ಲಯಾಳ ಕಾಲೇಜು ಬಳಿ ಹೋಗಿ ಹೊರಗೆ ಬರಲು ಹೇಳಿದ್ದನಂತೆ. ಹೀಗೆ ಲಯ ಹೊರಗೆ ಬಂದಾಗ ಮತ್ತೆ ಮದುವೆಯ ಪ್ರಸ್ತಾಪವನ್ನು ಮಾಡಿಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆಯು ಜಗಳ ಶುರುವಾಗಿದೆ. ಈ ಮೊದಲೆ ಅಂದುಕೊಂಡಂತೆ ಅವಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಜತೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಇರಲಿಲ್ಲ. ಆದರೆ, ಅವಳು ಸತ್ತ ಬಳಿಕ ನಾನು ಚಾಕುವಿನಿಂದ ಕೊಯ್ದುಕೊಂಡೆ ಎಂದು ಪವನ್ ಕಲ್ಯಾಣ ತಿಳಿಸಿದ್ದಾನೆ.
ಇದನ್ನೂ ಓದಿ | Amithabh Bachachan | ಮೆಸ್ಸಿ ಮತ್ತು ರೊನಾಲ್ಡೊ ಕೈ ಕುಲುಕಿದ ಅಮಿತಾಭ್ ಬಚ್ಚನ್, ವಿಡಿಯೊ ವೈರಲ್