ಕಲಬುರಗಿ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಚಿನ್ನಾಭರಣ ದೋಚಿ ಬಳಿಕ ಹತ್ಯೆ ಮಾಡುತ್ತಿದ್ದ ಹಂತಕನನ್ನು (Murder Case) ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ. ಹಣಮಂತ ಭಜಂತ್ರಿ ಬಂಧಿತ ಆರೋಪಿಯಾಗಿದ್ದಾನೆ.
ಇಲ್ಲಿನ ಜೇವರ್ಗಿ ತಾಲೂಕಿನ ಕುಕನೂರ ಗ್ರಾಮದಲ್ಲಿ ಮೇ 12ರಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿತ್ತು. ಗುರುಬಸ್ಸಮ್ಮ ಹುಚ್ಚಡ (65) ಎಂಬುವವರನ್ನು ಹಣಮಂತ ಭಜಂತ್ರಿ ಹತ್ಯೆ ಮಾಡಿ ಪರಾರಿ ಆಗಿದ್ದ.
ಗುರುಬಸಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲು ಯೋಜಿಸಿದ್ದರು. ಹೀಗಿರುವಾಗ ಊರಿಗೆ ಬೋರ್‌ವೆಲ್ ಕೊರೆಸಲು ಪಾಯಿಂಟ್ ಹೇಳುತ್ತಿದ್ದ ಹಣಮಂತ ಭಜಂತ್ರಿ ಗ್ರಾಮಕ್ಕೆ ಬಂದಿದ್ದ. ಈ ಮಾಹಿತಿ ತಿಳಿದ ಗುರುಬಸಮ್ಮ, ಹಣಮಂತನನ್ನು ತಮ್ಮ ಜಮೀನಿಗೆ ಕರೆದುಕೊಂಡು ಹೋಗಿದ್ದರು.
ಜಮೀನಿನಲ್ಲಿ ಗುರುಬಸಮ್ಮಳಿಗೆ ಒಂದು ಸ್ಥಳ ತೋರಿಸಿ ಪೂಜೆ ಮಾಡಲು ಹಣಮಂತ ಹೇಳಿದ್ದ. ಗುರುಬಸಮ್ಮ ಬಾಗಿ ಪೂಜೆ ಮಾಡುವಾಗ, ಹಿಂಬದಿಯಿಂದ ಬಂದ ಹಣಮಂತ ತಲೆ ಮೇಲೆ ದೊಡ್ಡದಾದ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಆಕೆಯ ಧರಿಸಿದ್ದ ಚಿನ್ನಾಭರಣವನ್ನು ದೋಚಿ, ಮೃತದೇಹವನ್ನು ಅಲ್ಲೆ ತಗ್ಗಿನಲ್ಲಿ ಮುಚ್ಚಿ ಹಾಕಿ ಪರಾರಿಯಾಗಿದ್ದ.
ಇದನ್ನೂ ಓದಿ: MTB Nagaraj: ಹೊಸಕೋಟೆಯಲ್ಲಿ ಮುಂದುವರಿದ ರಾಜಕೀಯ ವೈಷಮ್ಯ; ವೃತ್ತದಲ್ಲಿ ಅಳವಡಿಸಿದ್ದ ಎಂಟಿಬಿ ಬೋರ್ಡ್ ಧ್ವಂಸ
ನಾಗರಹಳ್ಳಿ ಗ್ರಾಮದವನಾಗಿದ್ದ ಹಣಮಂತ ಭಜಂತ್ರಿ ಜೀವನೋಪಾಯಕ್ಕಾಗಿ ಶಾಸ್ತ್ರ ಹೇಳುವುದು, ಬೋರ್‌ವೆಲ್ ಪಾಯಿಂಟ್ ಹೇಳುತ್ತಾ ಊರೂರು ಅಲೆಯುತ್ತಿದ್ದ ಎನ್ನಲಾಗಿದೆ. ಹರನಾಳ (ಬಿ) ಹಾಗೂ ಕುಕನೂರು ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ ಹಣಮಂತನನ್ನು ಶಹಾಪುರದಲ್ಲಿ ಬಂಧಿಸಲಾಗಿದೆ.