ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಗನೇ ಅಪ್ಪ-ಅಮ್ಮನನ್ನು ರಾಡ್‌ನಿಂದ ಹೊಡೆದು (Double murder) ಕೊಂದಿದ್ದ. ಇದೀಗ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು (Murder case) ಬಂಧಿಸಿದ್ದಾರೆ. ಶರತ್ (26) ಬಂಧಿತ ಆರೋಪಿ. ಶಾಂತ (60), ಭಾಸ್ಕರ್ (63) ಕೊಲೆಯಾದ ದುರ್ದೈವಿಗಳು.
ಶಾಂತ ಹಾಗೂ ಭಾಸ್ಕರ್ ದಂಪತಿ ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಬಂದು ನೆಲಸಿದ್ದರು. ತಾಯಿ ಶಾಂತ ಕೇಂದ್ರ ಸರ್ಕಾರದ ಸಿಬ್ಬಂದಿ ಆಗಿದ್ದು ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದರು. ತಂದೆ ಭಾಸ್ಕರ್ ಖಾಸಗಿ ಕ್ಯಾಂಟೀನ್ ಒಂದರಲ್ಲಿ ಕ್ಯಾಶಿಯರ್ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಆರೋಪಿ ಶರತ್ ಕಿರಿಯ ಮಗನಾಗಿದ್ದಾನೆ.
ಆರೋಪಿ ಶರತ್ ಮನೆಯಲ್ಲೇ ಇದ್ದರೆ ಮತ್ತೊಬ್ಬ ಮಗ ಕೆಲಸಕ್ಕೆ ಹೋಗುತ್ತಿದ್ದ. ಕಳೆದ ಸೋಮವಾರ (ಜು.17) ಸಂಜೆ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಶರತ್‌ನನ್ನು ಪ್ರಶ್ನಿಸಿದ್ದಕ್ಕೆ ಅಪ್ಪ-ಅಮ್ಮನ ಮೇಲೆ ಎರಗಿ ಏಕಾಏಕಿ ರಾಡ್‌ನಿಂದ ಹೊಡೆದಿದ್ದ. ಗಂಭೀರ ಗಾಯಗೊಂಡ ಇಬ್ಬರು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಇತ್ತ ಹತ್ಯೆ ಮಾಡಿ ಮನೆ ಡೋರ್ ಲಾಕ್ ಮಾಡಿ ಪರಾರಿ ಆಗಿದ್ದ.
ಇದನ್ನೂ ಓದಿ: Cow Slaughter : ಹಟ್ಟಿಯಲ್ಲಿದ್ದ 4 ಹಸುಗಳ ಕಳವು; ಪಕ್ಕದ ತೋಟದಲ್ಲೇ ಮಾಂಸ ಮಾಡಿದ ದುಷ್ಟರು
ದಂಪತಿಯ ದೊಡ್ಡ ಮಗ ಮಾರನೇದಿನ ಬೆಳಗ್ಗೆ ತಂದೆ-ತಾಯಿಗೆ ಕರೆ ಮಾಡಿದ್ದಾನೆ. ಆದರೆ ಯಾರು ಕರೆ ಸ್ವೀಕರಿಸಿಲ್ಲ. ಹೀಗಾಗಿ ಅನುಮಾನಗೊಂಡು ಕೂಡಲೇ ಪಕ್ಕದ ಮನೆಯವರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾನೆ. ಈ ವೇಳೆ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ತಿಳಿದು ಬಂದಿತ್ತು. ಸ್ಥಳೀಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.
ಕೊಡಗಿನಲ್ಲಿ ಅಡಗಿ ಕುಳಿತಿದ್ದ ಹತ್ಯೆಕೋರ
ತಂದೆ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಶರತ್ ಕೊಡಗಿನಲ್ಲಿ ತಲೆಮರೆಸಿಕೊಂಡಿದ್ದ. ಕೊಡಗು ಜಿಲ್ಲೆಯಲ್ಲಿದ್ದವನ್ನು ಹುಡುಕಿ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪೋಷಕರು ತನ್ನ ಬಗ್ಗೆ ಅಸಡ್ಡೆ ಮಾಡುತ್ತಿದ್ದ ಕಾರಣಕ್ಕೆ ಹತ್ಯೆ ಮಾಡಿದ್ದಾಗಿ ಪೊಲೀಸರ ಮುಂದೆ ಶರತ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಮೂರು ದಿನದಿಂದ ಕಾರಿನಲ್ಲೆ ದಿನ ಕಳೆದಿದ್ದ. ಸದ್ಯ ಆರೋಪಿ ಶರತ್‌ನನ್ನು ಹೆಚ್ಚಿನ ತನಿಖೆಗೆ ಪೊಲೀಸರು ಒಳಪಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ