Site icon Vistara News

Murder Case: ಗರ್ಭಿಣಿ ಪತ್ನಿಯ ಶೀಲ ಶಂಕಿಸಿ ಉಸಿರುಗಟ್ಟಿಸಿ ಕೊಂದಿದ್ದ ಪಾಪಿ ಪಶ್ಚಿಮ ಬಂಗಾಳದಲ್ಲಿ ಸೆರೆ

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ, ಗರ್ಭಿಣಿಯಾಗಿದ್ದವಳನ್ನು ಉಸಿರುಗಟ್ಟಿಸಿ ಕೊಂದಿದ್ದ (Murder Case) ಪ್ರಕರಣದಲ್ಲಿ ಕೊನೆಗೂ ಪಾಪಿ ಪತಿಯ ಬಂಧನವಾಗಿದೆ. ಜನವರಿ 16ರಂದು ಇಲ್ಲಿನ ಸುದ್ದಗುಂಟೆಪಾಳ್ಯ ಬಳಿಯ ತಾವರೆಕೆರೆಯ ಸುಭಾಷ್ ನಗರದ ಫ್ಲ್ಯಾಟ್‌ನಲ್ಲಿ ನಾಸೀರ್ ಹುಸೇನ್ ಎಂಬಾತ ಪತ್ನಿ ನಾಜ್‌ಳನ್ನು (22) ಹತ್ಯೆಗೈದು ಪರಾರಿ ಆಗಿದ್ದ.

ಬೆಂಗಳೂರಲ್ಲಿ ಪತ್ನಿಯ ಕೊಲೆ ಮಾಡಿ ಬಳಿಕ ನಾಸೀರ್‌ ಹುಸೇನ್‌ ವಿಮಾನದ ಮೂಲಕ ದೆಹಲಿಗೆ ಹಾರಿದ್ದ, ಅಲ್ಲಿಂದ ಪಶ್ಚಿಮ ಬಂಗಾಳ ತೆರಳಿ ತಲೆಮರೆಸಿಕೊಂಡಿದ್ದ. ಈತನನ್ನು ಹಿಂಬಾಲಿಸಿದ ಸುದ್ದಗುಂಟೆಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ, ಪಶ್ಚಿಮ ಬಂಗಾಳದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.

ಪ್ರೀತಿಸಿ ಮದುವೆ ಆಗಿದ್ದ ಜೋಡಿ
ನಾಜ್‌ ಹಾಗೂ ನಾಸಿರ್‌ ಪ್ರೀತಿಸಿ ಮದುವೆ ಆಗಿದ್ದರು. ತಂದೆ-ತಾಯಿ ಇಲ್ಲದ ನಾಸಿರ್‌ ಒಳ್ಳೆಯವನೆಂದು ನಂಬಿ ನಾಜ್ ಪೋಷಕರು ಮದುವೆ ಮಾಡಿ ಕೊಟ್ಟಿದ್ದರು. ಕಳೆದ ಆರು ತಿಂಗಳ ಹಿಂದಷ್ಟೇ ಮದುವೆ ಆಗಿ ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಈ ವೇಳೆ ನಾಜ್‌ ಆರು ವಾರಗಳ ಗರ್ಭಿಣಿ ಎಂಬ ಸುದ್ದಿ ತಿಳಿದು ಬಂದಿತ್ತು. ಇದರಿಂದ ಸಂತೋಷಗೊಳ್ಳದ ನಾಸಿರ್‌ ಸಂದೇಹ ಪಟ್ಟಿದ್ದ. ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನದಲ್ಲ ಎಂದು ಕಿರಿಕ್ ತೆಗೆದಿದ್ದ, ಅಷ್ಟೇ ಅಲ್ಲದೇ ಅಬಾರ್ಷನ್ ಮಾಡಿಸಬೇಕೆಂದು ಒತ್ತಾಯ ಮಾಡಿದ್ದ. ಆದರೆ, ಅಬಾರ್ಷನ್‌ ಮಾಡಿಸುವುದು ಪತ್ನಿಗೆ ಇಷ್ಟ ಇರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಜಗಳ ವಿಕೋಪಕ್ಕೆ ಹೋಗಿ ಹೆಂಡತಿಯನ್ನು ಕೊಲೆಗೈದಿದ್ದ.

ಇದನ್ನೂ ಓದಿ: ಅಸ್ಸಾಂನಲ್ಲಿ ಮದರಸಾಗಳ ಸಂಖ್ಯೆ ಕಡಿಮೆ ಮಾಡುವುದಾಗಿ ತಿಳಿಸಿದ ಸಿಎಂ ಹಿಮಂತ್​ ಬಿಸ್ವಾ ಶರ್ಮಾ; ಸಾಮಾನ್ಯ ಶಿಕ್ಷಣ ನೀಡಲು ನಿರ್ಧಾರ

ಫ್ಲೈಟ್‌ ಟೇಕ್‌ ಆಫ್‌ ಬಳಿಕ ಕೊಲೆ ಬಗ್ಗೆ ಸಂದೇಶ
ಅಕ್ರಮ ಸಂಬಂಧ ಇತ್ತು ಎಂಬ ಕಾರಣಕ್ಕೆ ಕೊಲೆ ಮಾಡಿದ್ದ ಪಾಪಿ ಮೊದಲೇ ಎಲ್ಲವನ್ನೂ ಪ್ಲ್ಯಾನ್‌ ಮಾಡಿದ್ದ. ಕೊಲೆಗೂ ಮುನ್ನವೇ ದೆಹಲಿಗೆ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದ. ಕೊಲೆ ಮಾಡಿ ಏರ್‌ಪೋರ್ಟ್‌ಗೆ ಟ್ಯಾಕ್ಸಿ ಬುಕ್ ಮಾಡಿಕೊಂಡು, ಚಾಲಕನಿಗೆ 4000 ರೂ. ಫೋನ್ ಪೇ ಮಾಡಿ, ಬಳಿಕ 3,500 ರೂ. ವಾಪಸ್‌ ಪಡೆದುಕೊಂಡಿದ್ದ. ಫ್ಲೈಟ್ ಟೇಕ್ ಆಫ್ ಆಗುವ ಕೊನೇ ಕ್ಷಣದಲ್ಲಿ ನಾಜ್‌ ಸಹೋರನಿಗೆ ಕೊಲೆ ಮಾಡಿರುವುದಾಗಿ ಸಂದೇಶವನ್ನು ರವಾನಿಸಿದ್ದ. ನಿನ್ನ ತಂಗಿ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ, ಮನೆಗೆ ಹೋಗಿ ಮೃತದೇಹವನ್ನು ತೆಗೆದುಕೊಳ್ಳಿ ಎಂದು ತಿಳಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಪಾಪಿ ನಾಸಿರ್‌ನನ್ನು ಎಳೆದುಕೊಂಡು ಬಂದಿದ್ದಾರೆ.

Exit mobile version