ಬೆಂಗಳೂರು: ಕುಡಿದ ಮತ್ತಿನಲ್ಲಿ ಕಲ್ಲಿನಿಂದ ವ್ಯಕ್ತಿಯ ತಲೆ ಜಜ್ಜಿ ಹತ್ಯೆ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರಿಮುತ್ತು ಎಂಬಾತ ತನ್ನ ಸ್ನೇಹಿತ ನರೇಶ್‌ನನ್ನು ಟೈಲ್ಸ್ ಕಲ್ಲಿನಿಂದ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ನರೇಶ್ ತೀವ್ರ ರಕ್ತಸ್ರಾವವಾಗಿ ಸ್ಥಳದಲೇ ಮೃತಪಟ್ಟಿದ್ದ.
ಇಲ್ಲಿನ ಗೋವಿಂದರಾಜ ನಗರದ ಕಾಮಧೇನು ಆಸ್ಪತ್ರೆ (Kamadhenu Hospital) ಮುಂಭಾಗ ನರೇಶ್ ತಲೆ ಮೇಲೆ ಮಾರಿಮುತ್ತು ಕಲ್ಲು ಎತ್ತಿ ಹಾಕಿ ಹತ್ಯೆ (Bengaluru Murder case) ಮಾಡಿ ಪರಾರಿ ಆಗಿದ್ದ. ಘಟನೆ ಬಳಿಕ ಪೊಲೀಸರು ಏರಿಯಾದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿದ್ದರು. ಟೆಕ್ನಿಕಲ್ ಅನಾಲಿಸಿಸ್ ಆಧರಿಸಿ ಆರೋಪಿ ಮಾರಿಮುತ್ತುನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ನರೇಶ್‌ಗೆ ಶುಕ್ರವಾರ (ಮಾ.24) ರಜೆ ಇದ್ದ ಕಾರಣ ಕುಡಿಯಲು ಬಾರ್‌ಗೆ ಬಂದಿದ್ದ. ಈ ವೇಳೆ ಕುಡಿದ ಅಮಲಿನಲ್ಲಿ ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಒಬ್ಬರಿಗೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡು ಕಿತ್ತಾಡಿಕೊಂಡಿದ್ದರು.
ಬಳಿಕ ನರೇಶ್ ಬಾರ್‌ನಿಂದ ಹೊರ ಬರುತ್ತಿದ್ದಂತೆ ಆತನ ಸ್ನೇಹಿತನೇ ಆದ ಮಾರಿಮುತ್ತು, ಮತ್ತೆ ಕ್ಯಾತೆ ತೆಗೆದು ಜಗಳ ಶುರು ಮಾಡಿದ್ದ. ಜಗಳ ತಾರಕಕ್ಕೇರಿದ್ದು ಕೋಪಗೊಂಡ ಮಾರಿಮುತ್ತು, ನರೇಶ್‌ನನ್ನು ಕೆಳಕ್ಕೆ ಕೆಡವಿ ಬಳಿಕ ಅಲ್ಲೆ ಇದ್ದ ಟೈಲ್ಸ್ ಕಲ್ಲಿನಿಂದ ತಲೆಯನ್ನು ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದ. ನರೇಶ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಮಾರಿಮುತ್ತು ಅಲ್ಲಿಂದ ಪರಾರಿ ಆಗಿದ್ದ.
ಅಪ್ರಾಪ್ತ ಬಾಲಕನಾಗಿದ್ದಲೇ ಕೊಲೆ ಮಾಡಿ ಜೈಲು ಸೇರಿದ್ದ ಆರೋಪಿ
ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದ ವಿಚಿತ್ರ ಮನಸ್ಥಿತಿಯವನಾಗಿದ್ದ. ಮಾರಿಮುತ್ತು ತನ್ನ 11 ವಯಸ್ಸಿಗೆ ಕೊಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಮೊನ್ನೆ ಮಧ್ಯಾಹ್ನ ನರೇಶ್ ಹಾಗೂ ಮಾರಿಮುತ್ತು ಇಬ್ಬರು ಬಾರ್‌ಗೆ ಹೋಗಿದ್ದರು. ಈ ವೇಳೆ ನರೇಶ್ ನಿನ್ನ ಭವಿಷ್ಯ ಹೇಳ್ತೇನೆ ಕೇಳು ಎಂದು ಮಾರಿಮುತ್ತುವನ್ನು ಕಿಚಾಯಿಸಿದ್ದ.
ಇದನ್ನೂ ಓದಿ: Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
ʻನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸತ್ತುಹೋಗುವೆ’ ಎಂದು ಮಾರಿಮುತ್ತುನ್ನು ರೇಗಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಾರಿಮುತ್ತು ಪರಸ್ಪರ ಕಿತ್ತಾಡಿಕೊಂಡಿದ್ದರು. ಜಗಳವಾಡುತ್ತಲೇ ಬಾರ್‌ನಿಂದ ಹೊರಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದು, ಆತ ಕುಸಿದು ಬೀಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದ. ಮೃತ ನರೇಶ್ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈಗ ಪೊಲೀಸರು ಮಾರಿಮುತ್ತುನನ್ನು ಬಂಧಿಸಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ