Site icon Vistara News

Murder Case: ಸ್ನೇಹಿತನೊಂದಿಗೆ ರೀಲ್ಸ್‌; ಮದುವೆ ಬೇಡ ಎಂದವಳ ಸುಟ್ಟು ಹಾಕಿದ ಪಾಗಲ್‌ ಪ್ರೇಮಿ

#image_title

ಯಾದಗಿರಿ: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ಕತ್ತು ಹಿಸುಕಿ ಹತ್ಯೆಗೈದು, ಬಳಿಕ ಸುಟ್ಟು ಹಾಕಿದವನು (Murder Case) ಈಗ ಜೈಲು ಪಾಲಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಅಂತಿಮಾ ವರ್ಮಾಳನ್ನು (25) ಯಾದಗಿರಿ ತಾಲೂಕಿನ ಅರಕೆರಾದ ಪಂಚಶೀಲ ನಗರದ ಮಾರುತಿ ರಾಠೋಡ್ ಎಂಬಾತ ಹತ್ಯೆ ಮಾಡಿ ಪರಾರಿ ಆಗಿದ್ದ.

ಈ ಸಂಬಂಧ ದೂರು ದಾಖಲಿಸಿಕೊಂಡ ಗುರುಮಠಕಲ್ ಪೊಲೀಸರು 18 ದಿನಗಳ ನಂತರ ಪ್ರಕರಣ ಭೇದಿಸಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಅಂತಿಮಾ ವರ್ಮಾ ತನ್ನ ಸಹೋದರ ರಾಮಕೇಶ ಎಂಬಾತನ ಮನೆಯಲ್ಲಿ ವಾಸವಾಗಿದ್ದಳು. ಆರೋಪಿ ಮಾರುತಿ ರಾಠೋಡ ಕೂಡ ಮುಂಬೈನ ರಾಮಕೇಶ ಮನೆ ಪಕ್ಕದಲ್ಲಿ ವಾಸವಾಗಿದ್ದನು.

ಖಾಸಗಿ ಕಂಪನಿಯಲ್ಲಿ ಮಾರುತಿ ಕೆಲಸ ಮಾಡುತ್ತಿದ್ದ. ಅಕ್ಕಪಕ್ಕ ಮನೆಯಲ್ಲಿದ್ದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಇಬ್ಬರ ಪ್ರೇಮಕ್ಕೆ ರೀಲ್ಸ್‌ವೊಂದು ಅಡ್ಡಿಯಾಗಿತ್ತು. ಅಂತಿಮಾ ವರ್ಮಾ ತನ್ನ ಸ್ನೇಹಿತರ ಜತೆ ಸೇರಿ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಿದ್ದಳು. ಈ ವಿಡಿಯೊ ನೋಡಿದ ಮಾರುತಿ ಸಿಟ್ಟಿಗೆದ್ದಿದ್ದ, ಪ್ರೀತಿಸಿದವಳು ಹೀಗೆ ಬೇರೆ ಹುಡುಗರೊಂದಿಗೆ ಕ್ಲೋಸ್‌ ಆಗಿ ರೀಲ್ಸ್‌ ಮಾಡುವುದನ್ನು ಕಂಡು ಅಸಮಾಧಾನಗೊಂಡಿದ್ದ. ಈ ನಡುವೆ ಮಾರುತಿಯಿಂದ ಅಂತರವನ್ನು ಕಾಯ್ದುಕೊಂಡಿದ್ದ ಅಂತಿಮಾ, ಭೇಟಿಯಾಗುವುದನ್ನು ನಿಲ್ಲಿಸಿದ್ದಳು.

ಆಕೆಯ ಈ ಬದಲಾವಣೆಗೆ ಕೋಪಗೊಂಡಿದ್ದ ಮಾರುತಿ, ಏಪ್ರಿಲ್‌ 2ರಂದು ಯಾದಗಿರಿಗೆ ಕರೆದುಕೊಂಡು ಬಂದಿದ್ದ. ಇಬ್ಬರು ಹೊರಗೆ ಎಲ್ಲ ಸುತ್ತಾಡಿಕೊಂಡು ಬಂದು ಬಳಿಕ ಮಾರುತಿ ಜಮೀನಿಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಅಂತಿಮಾಳಿಗೆ ರೀಲ್ಸ್‌ ಎಲ್ಲ ಮಾಡದಂತೆ ಕಿರಿಕ್‌ ತೆಗೆದಿದ್ದ. ಬಳಿಕ ಮದುವೆ ಮಾಡಿಕೊಳ್ಳೋಣ ಎಂದಾಗ ಇದಕ್ಕೆ ನಿರಾಕರಿಸಿದ್ದಳು.

ಇದನ್ನೂ ಓದಿ: Weather Report: ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಸಾಯುತ್ತೇನೆಂದು ವಿಡಿಯೊ ಹರಿಬಿಟ್ಟಿದ್ದ

ಮದುವೆ ವಿಚಾರಕ್ಕೆ ಕೋಪಗೊಂಡ ಮಾರುತಿ, ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿ ನಂತರ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ಈ ಘಟನೆ ನಂತರ ಹಂತಕ ಪಾಗಲ್ ಪ್ರೇಮಿ ನಾನು ಸಾಯುತ್ತೆನೆಂದು ವಿಡಿಯೊ ಮಾಡಿ, ತನ್ನ ಸಹೋದರನಿಗೆ ಕಳುಹಿಸಿದ್ದ. ಅಂತಿಮಾಳನ್ನು ಹತ್ಯೆ ಮಾಡಿ ಬಳಿಕ ಮುಂಬೈ, ಬೆಂಗಳೂರು ಎಂದು ತಲೆಮರೆಸಿಕೊಂಡು ಓಡಾಡಿಕೊಂಡಿದ್ದ. ಇತ್ತೀಚೆಗೆ ಯಾದಗಿರಿಗೆ ವಾಪಸ್‌ ಆಗಿದ್ದ ಆರೋಪಿ ನಗರ ಬಸ್ ನಿಲ್ದಾಣ ಮುಂಭಾಗದಲ್ಲಿ ಕಾಣಿಸಿಕೊಂಡಾಗ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಯುವತಿಯ ಅಣ್ಣ ರಾಮಕೇಶ ಮಾತನಾಡಿ, ಹತ್ಯೆ ಮಾಡಿದ ಮಾರುತಿಗೆ ಪೊಲೀಸರು ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Exit mobile version