ಬೆಂಗಳೂರು: ರೇವಾ ಕಾಲೇಜಿನ (Reva College) ವಿದ್ಯಾರ್ಥಿಯನ್ನು ಚಾಕು ಇರಿದು ಹತ್ಯೆ (Murder Case) ಮಾಡಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಭರತೇಶ್ ಬಂಧಿತ ಆರೋಪಿಯಾಗಿದ್ದು, ಪ್ರಮುಖ ಆರೋಪಿ ಅನಿಲ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬಾಗಲೂರು ಸಮೀಪವಿರುವ ರೇವಾ ಕಾಲೇಜಿನಲ್ಲಿ ಎರಡು ದಿನಗಳ ರೇವೋತ್ಸವ ಹೆಸರಲ್ಲಿ ಕಾಲೇಜು ಫೆಸ್ಟ್ ಅನ್ನು ಆಯೋಜಿಸಲಾಗಿತ್ತು. ಎಲ್ಲರೂ ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾಗಲೇ, ಅಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆದು ನೆತ್ತರು ಹರಿದಿತ್ತು. ಗಲಾಟೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದ ಗುಜರಾತ್ ಮೂಲದ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ (22) ಎಂಬಾತ ಹತ್ಯೆ ಆಗಿ ಹೋಗಿದ್ದ.
ಕಳೆದ ಏ.28 ರಂದು ಕಾಲೇಜು ಫೆಸ್ಟ್‌ನ ಕೊನೆಯ ದಿನದಂದು ಭಾಸ್ಕರ್ ಜೆಟ್ಟಿ, ಆತನ ಸ್ನೇಹಿತ ಶರತ್‌ನೊಂದಿಗೆ ಹೋಗುವಾಗ ಎದುರಿಗೆ ಆರೋಪಿ ಭರತೇಶ್, ಕುಶಾಲ್, ಗಗನ್ ರೆಡ್ಡಿ ಎಂಬ ಎರಡು ವಿದ್ಯಾರ್ಥಿಗಳ ಗುಂಪು ಎದುರು ಬದುರಾಗಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಭುಜ ಪರಸ್ಪರ ತಾಕಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು ಶರತ್ ಮೇಲೆ ಕುಶಾಲ್, ಭರತೇಶ್, ಗಗನ್ ರೆಡ್ಡಿ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಸ್ನೇಹಿತನ ಸಹಾಯಕ್ಕೆ ಹೋದ ಭಾಸ್ಕರ್ ಜೆಟ್ಟಿಯ ಕೈ ಹಾಗೂ ಪಕ್ಕೆಲುಬು ಭಾಗಕ್ಕೆ ಚಾಕುವಿನಿಂದ ಇರಿದಿದ್ದರು. ರಕ್ತದ ಮಡುವಲ್ಲಿ ಬಿದ್ದಿದ್ದ ಭಾಸ್ಕರ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಾಯಿತಾದರೂ, ಅದಾಗಲೇ ಆತ ಮೃತಪಟ್ಟಿದ್ದ.
ಹುಡುಗಿ ವಿಚಾರಕ್ಕೆ ಕಿರಿಕ್!
ಇನ್ನು ಹುಡುಗಿಯೊಬ್ಬಳ ವಿಚಾರಕ್ಕೆ ಕಿರಿಕ್ ನಡೆದಿತ್ತು ಎಂಬ ಆರೋಪವೂ ಇದೆ. ಆರೋಪಿ ಭರತೇಶ್ ಸ್ನೇಹಿತನ ಅತ್ತೆ ಮಗಳ ಮೇಲೆ ಭಾಸ್ಕರ್ ಜೆಟ್ಟಿಯ ಸ್ನೇಹಿತ ಶರತ್ ಆಟವಾಡುವಾಗ ಕ್ರಿಕೆಟ್ ಬಾಲ್‌ವೊಂದನ್ನು ಎಸೆದಿದ್ದ. ಇದರಿಂದ ಸಿಟ್ಟಾಗಿ ಆಕೆ ಈ ವಿಚಾರವನ್ನು ಸ್ನೇಹಿತರಾದ ಕುಶಾಲ್, ಭರತೇಶ್, ಗಗನ್ ರೆಡ್ಡಿಗೆ ಹೇಳಿದ್ದಳು.
ಇದನ್ನೂ ಓದಿ: Mann Ki Baat Live Updates: ಕೆಲವೇ ಹೊತ್ತಲ್ಲಿ ಮನ್ ಕೀ ಬಾತ್ 100ನೇ ಆವೃತ್ತಿ ಪ್ರಸಾರ; ಮಹತ್ವದ ಪಯಣ ಎಂದ ಪ್ರಧಾನಿ ಮೋದಿ
ಇದನ್ನು ಪ್ರಶ್ನೆ ಮಾಡಲು ಬಂದಾಗ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗುತ್ತಿದೆ. ಅನಿಲ್ ಎಂಬಾತ ಭಾಸ್ಕರ್ ಜೆಟ್ಟಿಗೆ ಚಾಕು ಇರಿದು ಪರಾರಿ ಆಗಿದ್ದಾನೆ. ಸದ್ಯ, ಬಾಗಲೂರು ಠಾಣೆ ಪೊಲೀಸರು ಭರತೇಶ್‌ನನ್ನು ಬಂಧಿಸಿದ್ದು, ಅನಿಲ್ ಸೇರಿದಂತೆ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾಲೇಜಿನೊಳಗೆ ಚಾಕು ಮತ್ತು ರಾಡ್‌ಗಳನ್ನು ಒಳಗೆ ತಂದಿದ್ದರು ಎಂಬ ಮಾಹಿತಿಯೂ ಇದೆ.