ಬೆಂಗಳೂರು: ಇಲ್ಲಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಶಾರದನಗರದಲ್ಲಿ ವ್ಯಕ್ತಿಯೊಬ್ಬ ಬರ್ಬರವಾಗಿ (murder Case) ಕೊಲೆಯಾಗಿದ್ದಾನೆ. ಗಣೇಶ್ ನಾಯ್ಕ್ ಹತ್ಯೆಯಾದವನು. ನಾರಾಯಣ್ ಕೊಲೆ ಆರೋಪಿಯಾಗಿದ್ದಾನೆ.
ಆಸ್ತಿ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು. ಒಬ್ಬರಿಗೊಬ್ಬರು ಕೈ ಮೀಲಾಯಿಸುವ ಹಂತಕ್ಕೆ ಹೋದಾಗ ಗಣೇಶ್ ನಾಯ್ಕ್ ಮಧ್ಯ ಪ್ರವೇಶ ಮಾಡಿದ್ದರು. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದ್ದು ಗಣೇಶ್ ನಾಯ್ಕ್‌ನ ಕೊಲೆಯಲ್ಲಿ ಅಂತ್ಯವಾಗಿದೆ.
ನಾರಾಯಣ ಹಾಗೂ ಮಲ್ಲೇಶ್ ಸಹೋದರರಾಗಿದ್ದು, ಇವರಿಬ್ಬರ ನಡುವೆ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿತ್ತು. ಮೃತ ಗಣೇಶ್ ನಾಯಕ್ ಹಾಗೂ ಮಲ್ಲೇಶ್ ಸ್ನೇಹಿತರಾಗಿದ್ದರು. ಗಣೇಶ್ ನಾಯಕ್ ಯಾವಾಗಲು ಮಲ್ಲೇಶ್ ಮನೆಯಲ್ಲೇ ಇರುತ್ತಿದ್ದ. ಈ ವಿಚಾರಕ್ಕೆ ನಾರಾಯಣ್ ಹಲವು ಬಾರಿ ಗಣೇಶ್ ನಾಯಕ್‌ಗೆ ಬೈಯುತ್ತಿದ್ದ.
ಭಾನುವಾರ ರಾತ್ರಿಯೂ ಕುಡಿದ ನಶೆಯಲ್ಲಿ ಮಲ್ಲೇಶ್ ಮನೆ ಬಳಿ ನಾರಾಯಣ್ ಬಂದಿದ್ದ. ಈ ವೇಳೆ ಅಣ್ಣನ ಮನೆಯಲ್ಲೇ ಇದ್ದ ಗಣೇಶ ನಾಯ್ಕ್ ಕಂಡು ಹಲ್ಲೆಗೆ ಮುಂದಾಗಿದ್ದ. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ನಾರಾಯಣ್, ಬಾರ್ ಬೆಂಡಿಂಗ್‌ಗೆ ಬಳಸುವ ರಾಡ್‌ನಿಂದ ಹೊಡೆದಿದ್ದಾನೆ.
ರಾಡ್‌ನಿಂದ ಹೊಡೆದ ರಭಸಕ್ಕೆ ಗಣೇಶ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಧ್ಯರಾತ್ರಿ ಘಟನೆ ನಡೆದಿದ್ದು, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ರವಾನೆ ಆಗಿದೆ. ಸದ್ಯ ಹತ್ಯೆ ಮಾಡಿ ಆರೋಪಿ ನಾರಾಯಣ್ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ