ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಪೊಲೀಸರಿಗೆ ಸುಳಿವೊಂದು ಸಿಕ್ಕಿದೆ. ಒಬ್ಬನಿಂದಲೇ ಈ ಕೃತ್ಯ ನಡೆದಿದ್ದು, ಪರಿಚಯಸ್ಥನೇ ಮನೆಯೊಳಗೆ ನುಗ್ಗಿ ಚೂರಿಯಿಂದ ಹತ್ಯೆ (Murder Case) ಮಾಡಿದ್ದಾನೆ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ಭಾನುವಾರ (ನ.12) ಬೆಳಗಿನ ಸಮಯ ಒಂದೇ ಕುಟುಂಬದ ನಾಲ್ವರ ಕಗ್ಗೊಲೆಯಾಗಿತ್ತು. ತಾಯಿ ಸೇರಿ ಮೂವರು ಮಕ್ಕಳ ಬರ್ಬರ ಹತ್ಯೆಯಾಗಿತ್ತು.
ತಾಯಿ ಹಸೀನಾ (46) ಹಾಗೂ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಮೃತ ದುರ್ದೈವಿ. ಹಂತಕನೊಬ್ಬ ಚೂರಿಯಿಂದ ಚುಚ್ಚಿ ಕೊಲೆಗೈದು ಪರಾರಿ ಆಗಿದ್ದಾನೆ. ಹಸೀನಾ ಗೃಹಿಣಿಯಾಗಿದ್ದು ಈಕೆಯ ಪತಿ ನೂರ್ ಮಹಮ್ಮದ್ ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಆಯ್ನಾಸ್ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಆಸಿಂ ಉಡುಪಿಯಲ್ಲಿ 8ನೇ ತರಗತಿ ಓದುತ್ತಿದ್ದ. ಇನ್ನು ಏರ್ ಇಂಡಿಯಾದಲ್ಲಿ ಅಫ್ನಾನ್ ಕೆಲಸ ಮಾಡುತ್ತಿದ್ದ.ರಜೆ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಷ್ಟೇ ಅಫ್ನಾನ್ ಉಡುಪಿಗೆ ಬಂದಿದ್ದ ಎನ್ನಲಾಗಿದೆ.
ಒಂದೇ ರೀತಿಯಲ್ಲಿ ಹತ್ಯೆ
ಬೆಂಗಳೂರಿನಿಂದ ಬಂದ ಹಂತಕ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ಒಬ್ಬರ ಮೇಲಿನ ದ್ವೇಷಕ್ಕೆ ಸಾಕ್ಷ್ಯ ನಾಶ ಮಾಡಲು ಉಳಿದ ಮೂವರನ್ನು ಕೊಲೆ ಮಾಡಿರಬಹುದೆಂದು ತಿಳಿದು ಬಂದಿದೆ. ಆರೋಪಿ ನಾಲ್ವರಿಗೂ ಒಂದೇ ರೀತಿಯಲ್ಲಿ ಚೂರಿ ಇರಿದು ಹತ್ಯೆ ಮಾಡಿದ್ದಾನೆ. ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣವನ್ನು ಭೇದಿಸಲು ಡಿವೈಎಸ್‌ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಿ, ತನಿಖೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: Raichur News : ಬಜ್ಜಿ ಕೊಡದ್ದಕ್ಕೆ ಕೋಪದ ಭರ್ಜಿ; ಬಿಸಿ ಎಣ್ಣೆ ಎರಚಿ ಪರಾರಿ
ಆಟೋ ಹಿಡಿದು ಬಂದಿದ್ದ ಹಂತಕ
ಕೊಲೆಗಡುಕ ಬೆಂಗಳೂರು ಭಾಗದ ಕನ್ನಡ ಮಾತನಾಡುತ್ತಿದ್ದ. ಸಂತೆಕಟ್ಟೆ ಸ್ಟಾಂಡ್‌ನಲ್ಲಿ ಆಟೋ ಹತ್ತಿದ ಆತ ತೃಪ್ತಿ ನಗರಕ್ಕೆ ಬಂದಿದ್ದ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ ಎಂದು ಆಟೋ ಚಾಲಕ ಶ್ಯಾಮ್ ಮಾಹಿತಿ ನೀಡಿದ್ದಾರೆ.
45ರ ಆಸುಪಾಸಿನ ವ್ಯಕ್ತಿ ಕಂದು ಬಣ್ಣದ ಶರ್ಟ್ ಧರಿಸಿ, ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ. ತೃಪ್ತಿ ನಗರದ ಮನೆಯಲ್ಲಿ ಬಿಟ್ಟು ಹೋದ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್‌ಗೆ ಬಂದಿದ್ದ. ಈ ವೇಳೆ ಶ್ಯಾಮ್ ಆತನನ್ನು ಮಾತಾಡಿಸಿದ್ದಾರೆ. ಆದರೆ ಆತ ಗಡಿಬಿಡಿಯಲ್ಲಿ ಮತ್ತೊಂದು ವಾಹನ ಏರಿ ಹೋಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಯುವತಿಗೆ ಬೆದರಿಸಿ ಪರಾರಿ
ಹಂತಕ ಏಕಾಏಕಿ ಮನೆಯೊಳಗೆ ನುಗ್ಗಿದ್ದಾನೆ. ಏನಾಗುತ್ತಿದೆ ಎಂದು ಅಂದಾಜಿಸುವುದರ ವೇಳೆಗೆ ಎದುರಿಗೆ ಬಂದ ಹಸೀನಾಗೆ ಚೂರಿ ಇರಿದಿದ್ದಾನೆ. ಬಳಿಕ ತಾಯಿ ಚಿರಾಟ ಕೇಳಿ ರೂಮಿನಿಂದ ಬಂದಿದ್ದ ಅಫ್ನಾನ್, ಅಯ್ನಾಝ್‌ಗೆ ಚಾಕುವಿನಿಂದ ಇರಿದಿದ್ದಾನೆ. ಮನೆಯೊಳಗೆ ಸದ್ದು ಕೇಳಿ ಆಟವಾಡುತ್ತಿದ್ದ ಆಸಿಂ ಒಳ ಬರುತ್ತಿದ್ದಂತೆ ಆತನನ್ನು ಕೊಂದಿದ್ದಾನೆ. ಇವೆಲ್ಲರ ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿ, ಏನು ಆಯಿತು ಎಂದು ನೋಡಲು ಬಂದಾಗ ಆಕೆಯನ್ನು ಬೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ