ಹೊಸಕೋಟೆ: ಇಲ್ಲಿನ ಡಿ. ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯು ಒಬ್ಬನ ಕೊಲೆಯಲ್ಲಿ (Murder case) ಅಂತ್ಯವಾಗಿದೆ. ಕೊಡಲಿ ಬೀಸಿ ದೊಡಪ್ಪನನ್ನೇ ಹತ್ಯೆ ಮಾಡಿದ ಆರೋಪಿ ಪರಾರಿ ಆಗಿದ್ದಾನೆ. ಕೃಷ್ಣಪ್ಪ (56) ಹತ್ಯೆಯಾದವರು. ಆದಿತ್ಯ ಎಂಬಾತ ಆರೋಪಿಯಾಗಿದ್ದಾನೆ.
ಮೃತ ಕೃಷ್ಣಪ್ಪ ಕುಟುಂಬದವರು ಬಿಜೆಪಿ ಬೆಂಬಲಿಗರಾದರೆ, ಕೃಷ್ಣಪ್ಪನ ಸಹೋದರ ಗಣೇಶಪ್ಪ ಎಂಬಾತ ಕಾಂಗ್ರೆಸ್ ಬೆಂಬಲಿಗರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಬಿಜೆಪಿಯ ಎಂ.ಟಿ.ಬಿ. ನಾಗರಾಜ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಇದೇ ವೇಳೆ ಕೃಷ್ಣಪ್ಪನವರ ಮನೆ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿಯನ್ನು ಸಿಡಿಸಿದ್ದಾರೆ. ಮಾತ್ರವಲ್ಲದೆ ಮನೆಯ ಕಾಂಪೌಂಡ್ ಒಳಗೆ ಪಟಾಕಿಯನ್ನು ಎಸೆದಿದ್ದಾರೆ. ಕೃಷ್ಣಪ್ಪನವರು ಇದನ್ನು ಪ್ರಶ್ನೆ ಮಾಡಿದಾಗ ಮಾತಿನ ಚಕಮಕಿ ನಡೆದಿದೆ. ಕೃಷ್ಣಪ್ಪ ಹಾಗೂ ಗಣೇಶಪ್ಪ ನಡುವೆಯೂ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಕೃಷ್ಣಪ್ಪನವರ ಮಗ ಪ್ರಶ್ನೆ ಮಾಡಲು ಬಂದಾಗ ಗಣೇಶಪ್ಪನ ಮಗ ಆದಿತ್ಯಾ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಆದಿತ್ಯ ಕೊಡಲಿ ತೆಗೆದುಕೊಂಡು ದೊಡ್ಡಪ್ಪನನ್ನೇ ಹತ್ಯೆ ಮಾಡಿದ್ದಾನೆ.
ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಕೋಟೆಯಲ್ಲಿ ಪಟಾಕಿ ವಿಚಾರಕ್ಕೆ ಬಡಿದಾಟ ಗಾಯಾಳುಗಳ ಆರೋಗ್ಯ ವಿಚಾರಿಸಲು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೊಸಕೋಟೆಯ ಎಂವಿಜೆ ಆಸ್ವತ್ರೆಗೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಬೆಂಬಲಿಗರು ದಾಂಧಲೆ ಶುರು ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮನೆಗಳ ಮುಂದೆ ಪಟಾಕಿ ಹಚ್ಚುವುದು, ಕಾಂಪೌಂಡ್ ಒಳಗೆ ಪಟಾಕಿ ಎಸೆಯುವ ಕೆಲಸ ಮಾಡಿದ್ದಾರೆ. ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಿ ಗಲಾಟೆ ಗದ್ದಲ ಮಾಡಿದ್ದಾರೆ.
ಇದನ್ನೂ ಓದಿ: Traffic Violation: ಎಲೆಕ್ಷನ್ ಟೈಂನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್; 25 ದಿನದಲ್ಲಿ 4 ಲಕ್ಷ ಕೇಸ್, 20 ಕೋಟಿ ರೂ. ದಂಡ
ಕೃಷ್ಣಪ್ಪ ಎಂಬಾತನ ಹತ್ಯೆಯನ್ನು ಮಾಡಿದ್ದಾರೆ. ಶಾಸಕರ ಕುಮ್ಮಕ್ಕಿಲ್ಲದೆ ಇವೆಲ್ಲ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಜತೆಗೆ ಕೂಡಲೆ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ರಾತ್ರಿಯಿಂದ 6-7 ಹಳ್ಳಿಗಳಲ್ಲಿ ಇದೇ ರೀತಿ ಗಲಾಟೆಯಾಗಿದೆ ಎಂದು ಕಿಡಿಕಾರಿದರು.