Site icon Vistara News

Murder Case: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಹತ್ಯೆ ಪ್ರಕರಣ; ಬರ್ತ್‌ಡೇ ಗಿಫ್ಟ್‌ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

#image_title

ಬೆಂಗಳೂರು: ಇಲ್ಲಿನ ನಂಜಪ್ಪ ಸರ್ಕಲ್‌ ಸಮೀಪ ಒಂಟಿ ಮಹಿಳೆ ಕೊಲೆ ಪ್ರಕರಣದ ಆರೋಪಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಜಸ್ಟ್‌ ಬರ್ತ್‌ಡೇ ಗಿಫ್ಟ್‌ಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.

ಫೆ.13ರಂದು ಕೌಸರ್ ಮುಬೀನ್ (34) ಎಂಬಾಕೆಯನ್ನು ನದೀಂ ಪಾಷ ಎಂಬಾತ ಕತ್ತು ಸೀಳಿ ಬರ್ಬರವಾಗಿ ಹತ್ಯೆ (Murder Case) ಮಾಡಿ ಪರಾರಿ ಆಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ತನಿಖೆಗೆ ಒಳಪಡಿಸಿದಾಗ ಇದು ಬರ್ತ್‌ ಡೇ ಗಿಫ್ಟ್‌ ವಿಚಾರಕ್ಕೆ ನಡೆದ ಹತ್ಯೆ ಎಂದು ತಿಳಿದು ಬಂದಿದೆ.

ಕೌಸರ್‌ಗೆ ನಾಲ್ಕು ವರ್ಷದ ಹಿಂದೆ ನದೀಂ ಪಾಷ ಪರಿಚಯವಾಗಿದ್ದ. ಈ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದರೂ ತಮ್ಮ ಜೋಡಿಯನ್ನು ಬಿಟ್ಟು ಒಟ್ಟಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಕಳೆದ ಫೆ.11ರಂದು ಕೌಸರ್‌ಳ ಹುಟ್ಟುಹಬ್ಬ ಇತ್ತು, ಬರ್ತ್‌ಡೇ ಗಿಫ್ಟ್ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು. ಆಕೆಯ ಮುನಿಸು ಕಡಿಮೆ ಮಾಡಲು ಸೋಮವಾರ ಬೆಳಗ್ಗೆ ಕೌಸರ್‌ಳ ಮನೆಗೆ ನದೀಂ ಬಂದಿದ್ದ. ಇಬ್ಬರು ಮಧ್ಯಾಹ್ನ ಊಟಕ್ಕೆ ಹೋಗಲು ತಯಾರಾಗಿದ್ದಾಗ ಗಿಫ್ಟ್‌ ವಿಚಾರಕ್ಕೆ ಜಗಳ ಶುರುವಾಗಿತ್ತು.

ನದೀಂ ಬರ್ತ್ ಡೇ ಗಿಫ್ಟ್ ಆಗಿ ಬೆಳ್ಳಿ ಚೈನ್ ತಂದು ಕೊಟ್ಟಿದ್ದನಂತೆ. ಇದರಿಂದ ಖುಷಿಯಾಗದ ಕೌಸರ್‌ ʻಕೇವಲ ಬೆಳ್ಳಿ ಚೈನ್ ಕೊಟ್ಟಿದ್ದೀಯ, ಚಿನ್ನದ ಚೈನ್ ಕೊಡುತ್ತೀಯ ಎಂದು ಅಂದುಕೊಂಡಿದ್ದೆ. ಮೊದಲು ಇದ್ದ ಗಂಡ ಸಹ ಹೀಗೆಯೇ ಮಾಡುತ್ತಿದ್ದ. ನೀನು ಕೂಡಾ ಹಾಗೇ ಮಾಡಿದ್ದೀಯ” ಎಂದು ತನ್ನ ಅಸಮಾಧಾನವನ್ನು ಹೊರಹಾಕಿದ್ದಾಳೆ. ಅಲ್ಲದೆ, ಆಕೆ ಈ ಹಿಂದೆ ನೀಡಿದ್ದ ಎರಡು ಲಕ್ಷ ರೂಪಾಯಿಯನ್ನು ವಾಪಸ್ ಕೊಡು ಎಂದು ಗಲಾಟೆ ಮಾಡಿದ್ದಾಳೆ.

ಇದನ್ನೂ ಓದಿ: Animals attack : ಚನ್ನಪಟ್ಟಣದಲ್ಲಿ ಒಂಟಿ ಸಲಗ ದಾಳಿ, ರೈತನ ಕಾಲು ಮುರಿತ; ತಿ. ನರಸೀಪುರದಲ್ಲಿ ಬೋನಿಗೆ ಬಿತ್ತು ಚಿರತೆ

ಇದರಿಂದ ಕೋಪಗೊಂಡಿದ್ದ ನದೀಂ ಜಗಳ ಮಾಡಿದ್ದಾನೆ. ಜಗಳ ಅತಿರೇಕಕ್ಕೆ ಹೋಗಿ ನದೀಂ ಚಾಕುವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಚಾಕು ತೆಗೆದುಕೊಂಡಾಗ ಹೊಡಿ ನೋಡುವಾ ಎಂದಿದ್ದಾಳೆ. ಈ ವೇಳೆ ಘರ್ಷಣೆ ನಡೆದಿದ್ದು, ಚಾಕು ಕೌಸರ್‌ ಕುತ್ತಿಗೆಗೆ ಬಿದ್ದಿದ್ದರಿಂದ ಕೊಲೆಯಲ್ಲಿ ಪ್ರಕರಣವು ಅಂತ್ಯವಾದಂತಾಗಿದೆ. ಸದ್ಯ ಅಶೋಕನಗರ ಪೊಲೀಸರು ಆರೋಪಿ ನದೀಂನನ್ನು ಬಂಧಿಸಿದ್ದು ವಿಚಾರಣೆ ಮುಂದುವರಿಸಿದ್ದಾರೆ.

Exit mobile version