ವಿಜಯಪುರ: ನಗರದ ಜಾಮಿಯಾ ಮಸೀದಿ ಬಳಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಬಾಲಕನ (Murder Case) ಹತ್ಯೆಗೈದಿದ್ದಾನೆ. ಫಾರಿದ್ ಹೊನವಾಡ (15) ಮೃತಪಟ್ಟಿರುವ ದುರ್ದೈವಿ. ರಾಹುಲ್ ಬೆಳ್ಳುಬ್ಬಿ ಹತ್ಯೆಗೈದಿರುವ ಆರೋಪಿ ಆಗಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ರಾಹುಲ್, ಫಾರಿದ್ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ.
ಬರ್ತ್ ಡೇ ಕೇಕ್ ಕತ್ತರಿಸಿದ ಬಳಿಕ ಪ್ರೇಯಸಿಯ ಕೊರಳು ಕತ್ತರಿಸಿ ಕೊಂದ ಕ್ರೂರ ಪ್ರೇಮಿ
ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಬರ್ತ್ ಡೇ ನೆಪದಲ್ಲಿ ಕರೆಸಿಕೊಂಡು ಕೇಕ್ ಕತ್ತರಿಸಿದ ಕೈಯಲ್ಲೇ ಕೊರಳು ಕೊಯ್ದು ಕೊಲೆ ಮಾಡಿದ ಭಯಾನಕ ಘಟನೆಯೊಂದು ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ (24) ಅವರೇ ಕೊಲೆಯಾದ ಯುವತಿ. ಪ್ರಶಾಂತ್ ಎಂಬ ಆಕೆಯ ಪ್ರೇಮಿಯೇ ಈ ಕೊಲೆಗಾರ.
ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರು. ಇವರು ದೂರ ಸಂಬಂಧಿಕರಾಗಿದ್ದರು. ಕಳೆದ ಆರು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಕಳೆದ ಮಂಗಳವಾರ ನವ್ಯಳ ಹುಟ್ಟುಹಬ್ಬ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿ ಆಕೆಯನ್ನು ಭೇಟಿಯಾಗುವುದನ್ನು ತಪ್ಪಿಸಿಕೊಂಡಿದ್ದ ಪ್ರಶಾಂತ್ ಶುಕ್ರವಾರ ರಾತ್ರಿ ಹುಟ್ಟುಹಬ್ಬದ ಸೆಲೆಬ್ರೇಷನ್ಗೆ ಸಿದ್ಧತೆ ಮಾಡಿಕೊಂಡಿದ್ದ.
ಅದರಂತೆ ಆಕೆಯನ್ನು ಕರೆಸಿಕೊಂಡಿದ್ದ. ಆಕೆಯ ಹೆಸರು ಬರೆಸಿ ಕೇಕ್ ಕೂಡಾ ತಂದಿಟ್ಟಿದ್ದ. ಪ್ರಿಯಕರ ತನಗಾಗಿ ಬರ್ತ್ ಡೇ ಪಾರ್ಟಿ ಇಟ್ಟುಕೊಂಡಿದ್ದಾನೆ ಎಂದು ಖುಷಿಯಲ್ಲಿ ಆಕೆ ಅಲ್ಲಿಗೆ ಹೋಗಿದ್ದಳು.
ಅದರಂತೆ ಖುಷಿಯಿಂದ ಆಕೆಯನ್ನು ಎದುರುಗೊಂಡ ಆತ ಕೇಕ್ ಕತ್ತರಿಸಿ ಆಕೆಗೆ ತಿನ್ನಿಸಿದ್ದ. ಅದಕ್ಕಿಂತಲೂ ಮೊದಲು ಇಡೀ ಕೋಣೆಯನ್ನು ಅವನು ಹುಟ್ಟುಹಬ್ಬಕ್ಕಾಗಿ ಅಲಂಕರಿಸಿದ್ದ. ಆಕೆ ಸಂಭ್ರಮದಿಂದ ಕೇಕ್ ತಿನ್ನುತ್ತಿದ್ದಂತೆಯೇ ಪ್ರಶಾಂತ್ನೊಳಗಿನ ಕ್ರೂರಿ ಎದ್ದು ನಿಂತಿದ್ದ. ಮೊದಲೇ ಪ್ಲ್ಯಾನ್ ಮಾಡಿದ್ದಂತೆ ಆತ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಕೇಕ್ ಕತ್ತರಿಸಿದ ಕೈಯಲ್ಲೇ ಆಕೆಯನ್ನು ಕೊರಳನ್ನು ಕತ್ತರಿಸಿದ ದುಷ್ಟ ಆಕೆಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಹೋಗಿದ್ದಾನೆ.
ಆಕೆಯ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಆಕೆ ಶವವಾಗಿ ಬಿದ್ದಿದ್ದಳು. ಇದೀಗ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆರೋಪಿ ಪ್ರಶಾಂತ್ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Tragic death : ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಿಡಿ ಕಂಬದಿಂದ ಕೆಳಗೆ ಬಿದ್ದು ಮಹಿಳೆ ದಾರುಣ ಮೃತ್ಯು
ಪ್ರಶಾಂತ್ ಯಾಕೆ ನವ್ಯಳನ್ನು ಕೊಲೆ ಮಾಡಿದ? ಅವನಿಗೆ ಏನಾದರೂ ಸಂಶಯವಿತ್ತಾ? ಅವರ ನಡುವೆ ಜಗಳ ಆಗಿತ್ತಾ ಎನ್ನುವುದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಾಗಿದೆ.