ವಿಜಯಪುರ: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿದ (Woman Murder) ಘಟನೆ ವಿಜಯಪುರ ಜಿಲ್ಲೆಯ (Vijayapura News) ಸಿಂದಗಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಇಲ್ಲಿನ ಟ್ರಾಕ್ಟರ್ ಶೋ ರೂಂ ಹತ್ತಿರ ಸ್ಕೂಟರ್ ತಡೆದ ದುಷ್ಕರ್ಮಿಗಳು ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಕೊಲೆಯಾದ ಮಹಿಳೆಯನ್ನು ಗಂಗೂಬಾಯಿ ಯಂಕಂಚಿ (28) ಎಂದು ಗುರುತಿಸಲಾಗಿದೆ. ಇವರು ಸಿಂದಗಿ ಪಟ್ಟಣದ ನಿವಾಸಿಯಾಗಿದ್ದಾರೆ. ಗಂಗೂಬಾಯಿ ಅವರು ಚಿಕ್ಕ ಸಿಂದಗಿ ಮಾರ್ಗವಾಗಿ ಸಿಂದಗಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
ಸಹೋದರ ಸಂಬಂಧಿಯೋರ್ವರ ಜೊತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯ ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯನ್ನು ಹಿಡಿದು ಕುತ್ತಿಗೆಗೆ ಚೂರಿ ಹಾಕಿ ಕೊಂದಿದ್ದಾರೆ. ಕೊಲೆ ಮಾಡಿದ ಬಳಿಕ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಕ್ರೌರ್ಯ ಎಷ್ಟಿತ್ತೆಂದರೆ ಹಾಕಿದ ಚೂರಿಯನ್ನು ಕೂಡಾ ಅವರು ಕೊರಳಲ್ಲೇ ಬಿಟ್ಟು ಹೋಗಿದ್ದಾರೆ.
ಸೋದರ ಸಂಬಂಧಿ ಹೇಳುವುದೇನು?
ಮಹಿಳೆಯನ್ನು ಸ್ಕೂಟರ್‌ನಲ್ಲಿ ಕರೆದೊಯ್ಯುತ್ತಿದ್ದ ಸೋದರ ಸಂಬಂಧಿ ಪ್ರಕಾರ, ನಾನು ಮತ್ತು ಗಂಗೂ ಬಾಯಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದೆವು. ಆಗ ಮೂರ್ನಾಲ್ಕು ಜನ ಬಂದು ಅಡ್ಡಗಟ್ಟಿದರು. ಕೂಡಲೇ ಎಲ್ಲರೂ ದಾಳಿ ಮಾಡಲು ಶುರು ಮಾಡಿದರು. ಏಕಾಏಕಿ ದಾಳಿ ನಡೆಸುತ್ತಿದ್ದಾಗ ಭಯದಿಂದ ನಾನು ಓಡಿ ಹೋದೆ. ಅವರು ಕೊಲೆ ಮಾಡಿ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಕೊಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ ಸ್ಥಳಕ್ಕೆ ಸಿಪಿಐ ಡಿ ಹುಲಗಪ್ಪ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸೊಸೆಗೆ ಕಿರುಕುಳ ನೀಡಿದ ಸ್ನೇಹಿತನ ಇರಿದು ಕೊಲೆ
ಶಿವಮೊಗ್ಗ: ಶಿವಮೊಗ್ಗದಲ್ಲಿ ತನ್ನ ಸೊಸೆಗೆ ಕಿರುಕುಳ ನೀಡಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಸ್ನೇಹಿತನೇ ಕೊಲೆ (Murder Case) ಮಾಡಿದ್ದಾನೆ.
ಆಸೀಫ್ (25) ಕೊಲೆಯಾಗಿರುವ ಯುವಕ. ಆತನ ಸ್ನೇಹಿತ ಜಬೀ (25) ಎಂಬಾತ ಚಾಕುವಿನಿಂದ ಇರಿದು ಆಸೀಫ್‌ನ ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ಇಲಿಯಾಜ್ ನಗರದಲ್ಲಿ ಘಟನೆ ನಡೆದಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಿವಮೊಗ್ಗದ ಮಂಡ್ಲಿ ವಾಸಿ ಆಸಿಫ್ ಆಟೋ ಚಾಲಕನಾಗಿದ್ದು, ಜಬೀ ಎಂಬಾತನ ಸಹೋದರಿಯ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾತುಗೆ ಮಾತು ಬೆಳೆದು ಸಂಘರ್ಷಕ್ಕೆ ತಿರುಗಿ ಜಬೀ ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ.
ಹೊಟ್ಟೆ ನೋವು ತಾಳಲಾರದೆ ಶಿಕ್ಷಕ ಆತ್ಮಹತ್ಯೆ
ದಾವಣಗೆರೆ: ಹೊಟ್ಟೆ ನೋವು ತಾಳಲಾರದೆ ಶಿಕ್ಷಕರೊಬ್ಬರು ಕೆರೆಗೆ ಹಾರಿ ಅತ್ಮಹತ್ಯೆ (suicide case) ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಹೆದ್ದಾರಿ ಪಕ್ಕದಲ್ಲಿರುವ ಕೆರೆಯಲ್ಲಿ ಅವರ ಶವ ಪತ್ತೆಯಾಗಿದೆ.
ಚನ್ನಗಿರಿ ತಾಲೂಕಿನ ಹಿರೇಉಡ ಗ್ರಾಮದ ನಿವಾಸಿ ಶಿಕ್ಷಕ ಕೃಷ್ಣನಾಯ್ಕ್(42) ಆತ್ಮಹತ್ಯೆ ಮಾಡಿಕೊಂಡವರು. ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೃಷ್ಣನಾಯ್ಕ್, ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನಾಲ್ಕು ದಿನದ ಹಿಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರಿಗೆ ನೀರಿನಲ್ಲಿ ಕೃಷ್ಣನಾಯ್ಕ್ ಮೃತದೇಹ ಕಂಡಿದ್ದು, ಕೂಡಲೇ ಚನ್ನಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : Murder Case: ಕುಡಿದ ನಶೆಯಲ್ಲಿ ತಂದೆ ತಲೆ ಮೇಲೆ ಒರಳು ಕಲ್ಲು ಎತ್ತಿಹಾಕಿದ ಪಾಪಿ ಮಗ