ಬೆಂಗಳೂರು/ಚಿಕ್ಕಮಗಳೂರು: ಬೆಂಗಳೂರು ಮೂಲದ ಯುವಕನ ಅಪಹರಣ ಮತ್ತು ಕೊಲೆ ಪ್ರಕರಣವನ್ನು (Murder Case) ಪೊಲೀಸರು ಭೇದಿಸಿದ್ದು, ಚಾರ್ಮಾಡಿ ಘಾಟಿನಲ್ಲಿ ಯುವಕನ ಮೃತದೇಹ ಪತ್ತೆ ಆಗಿದೆ. ಅನಿಲ್, ಭರತ್, ಕಿಶೋರ್ ಹಾಗೂ ಲೋಹಿತ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಅಂಧ್ರಹಳ್ಳಿ ನಿವಾಸಿ ಗೋವಿಂದರಾಜ್ ಎಂಬಾತ ಮತ್ತಿಕೆರೆಯ 20 ವರ್ಷದ ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದ್ದ. ಆದರೆ, ಯುವತಿ ಮೊಬೈಲನ್ನು ಮನೆಯಲ್ಲೇ ಬಿಟ್ಟು ಕಾಲೇಜಿಗೆ ತೆರಳಿದ್ದಳು. ಈ ಮೆಸೇಜ್ ಅನ್ನು ಯುವತಿಯ ಸೋದರಮಾವ ಅನಿಲ್ ನೋಡಿದ್ದಾನೆ.
ಇದರಿಂದ ಅನಿಲ್ ಸಿಟ್ಟಿಗೆದ್ದಿದ್ದಾನೆ. ಏಕೆಂದರೆ, ಆತ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಕಾರಣಕ್ಕೆ ಮದುವೆಯಾಗಬೇಕೆಂದೂ ನಿಶ್ಚಯಿಸಿಕೊಂಡಿದ್ದ. ಹೀಗಾಗಿ ಯುವತಿಗೆ ತಾನೇ ಆರ್ಥಿಕ ನೆರವು ನೀಡಿ ವಿದ್ಯಾಭ್ಯಾಸದ ಹೊಣೆಯನ್ನೂ ಹೊತ್ತಿದ್ದ. ಆದರೆ, ಕಾಲೇಜಿಗೆ ಹೋಗಿದ್ದ ಯುವತಿಯು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಗೋವಿಂದರಾಜು ಜತೆ ಲವ್ ಮಾಡುತ್ತಿದ್ದ ವಿಷಯ ಅನಿಲ್‌ಗೆ ಮೆಸೇಜ್ ಮೂಲಕ ತಿಳಿದಿದ್ದರಿಂದ ಸಿಟ್ಟಾಗಿ, ಮಾತಾಡಬೇಕು ಬಾ ಎಂದು ಗೋವಿಂದರಾಜ್‌ನನ್ನು ಕರೆಸಿಕೊಂಡಿದ್ದ.
ಈ ವೇಳೆ ಗೋವಿಂದರಾಜ್‌ನಿಗೆ ಹೆದರಿಸುವ ಉದ್ದೇಶವಷ್ಟೇ ಇವರಿಗೆ ಇತ್ತು. ಆದರೆ, ತೀವ್ರವಾಗಿ ಹಲ್ಲೆ ಮಾಡಿದ್ದರಿಂದ ಅಲ್ಲೇ ಮೃತಪಟ್ಟಿದ್ದ. ಹೀಗಾಗಿ ಇವರ ಜತೆ ಹೋದವನು ವಾಪಸಾಗಲಿಲ್ಲ. ಇತ್ತ ಗೋವಿಂದರಾಜು ತಂದೆ ರಘು ಅವರು ನನ್ನ ಮಗನನ್ನು ಆಂಧ್ರಹಳ್ಳಿ ಬಳಿ ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆಂದು ಯಶವಂತಪುರ ಠಾಣೆಯಲ್ಲಿ ಅನಿಲ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.
ಆರೋಪಿಗಳಿಂದ ಪೊಲೀಸರಿಗೆ ಬಂದಿತ್ತು ಫೋನ್ ಕಾಲ್
ʻನಾನು ಒಬ್ಬ ಹುಡುಗನಿಗೆ ಹೊಡೆದಿದ್ದೇನೆʼ ಎಂದು ಹೇಳಿ 112 ಸಹಾಯವಾಣಿಗೆ ಆರೋಪಿಗಳು ಮೊದಲೇ ಫೋನ್ ಕಾಲ್ ಮಾಡಿದ್ದರು. ಬಳಿಕ ಗೋವಿಂದರಾಜನನ್ನು ಕರೆಸಿ ಅಲ್ಲಿಂದ ಬೈಕ್‌ನಲ್ಲಿ ಕೂರಿಸಿಕೊಂಡು ಬ್ಯಾಡರಹಳ್ಳಿ ಸಮೀಪ ಅನಿಲ್ ಹಾಗೂ ಟೀಂ ಕರೆದೊಯ್ದು ಯುವತಿಗೆ ಮಾಡಿದ್ದ ಮೆಸೇಜ್ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿನ ಚಕಮಕಿ ಉಂಟಾಗಿದ್ದು, ಗೋವಿಂದರಾಜು ಮಾಡಿದ್ದ ಅಶ್ಲೀಲ ಮೆಸೇಜ್‌ಗಳನ್ನು ಕಂಡ ಅನಿಲ್ ಮರದ ಪೀಸ್‌ನಿಂದ ಹಲ್ಲೆ ಮಾಡಿದ್ದ.
ಹಲ್ಲೆಯಿಂದ ಕುಸಿದು ಬಿದ್ದಿದ್ದ ಗೋವಿಂದರಾಜು ಮೃತಪಟ್ಟಿದ್ದ. ಇದರಿಂದ ಗಾಬರಿಯಾದ ಆರೋಪಿಗಳು ಶವವನ್ನು ಚಾರ್ಮಾಡಿಘಾಟ್‌ನಲ್ಲಿ ಬಿಸಾಡಿ ಬಂದಿದ್ದರು. ಆದರೆ, ತನಿಖೆ ಕೈಗೊಂಡಿದ್ದ ಪೊಲೀಸರು ಅನಿಲ್ ಮೇಲೆ ಅನುಮಾನವಿದ್ದರಿಂದ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದ.
ಇದನ್ನೂ ಓದಿ: ದೇವರು ಹೇಳಿದ್ದಕ್ಕೆ ಹೆಂಡತಿಗೆ ವಿಚ್ಛೇದನ ಕೊಡಲು ಹೊರಟಿದ್ದ ಪತಿರಾಯ; ಕೊನೆಗೆ ಜಡ್ಜ್ ಮಾತು ಕೇಳಿ ಮತ್ತೆ ಒಂದಾದ
ಬುಧವಾರ (ಫೆ.1) ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಅವರ ತಂಡ ಸ್ಥಳೀಯ ಸಮಾಜ ಸೇವಕರ ಜತೆ ಸೇರಿ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.