ಶಿವಮೊಗ್ಗ: ನಗರದ ವಿಜಯನಗರದಲ್ಲಿ ನಡೆದ ಎಂಜಿನಿಯರ್ ಒಬ್ಬರ ಪತ್ನಿಯ ಕೊಲೆಯ ಪ್ರಮುಖ ಆರೋಪಿಯ (Murder Case) ತಾಯಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕಮಲಮ್ಮ (54) ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿರುವ ಹನುಮಂತ ನಾಯ್ಕ ಎಂಬಾತನ ತಾಯಿ ಸೀತಾ ಬಾಯಿ (50) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು.
ಜೂನ್ 17ರಂದು ಶಿವಮೊಗ್ಗದ ವಿಜಯನಗರದಲ್ಲಿ ಕಮಲಮ್ಮ ಎಂಬುವರನ್ನು ಕೊಲೆ ಮಾಡಲಾಗಿತ್ತು. ಅವರ ಪತಿ, ಅಜ್ಜಂಪುರದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನ ಎಂಬವರ ಪತ್ನಿಯಾಗಿರುವ ಇವರನ್ನು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಜತೆಗೆ ಮನೆಯಿಂದ ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಲಾಗಿತ್ತು.
ಈ ಕೊಲೆಯ ತನಿಖೆಯನ್ನು ನಡೆಸಿದ ಪೊಲೀಸರು ಕಾರು ಚಾಲಕನಾಗಿರುವ ಹನುಮಂತ ನಾಯ್ಕನೇ ಕೊಲೆಗಾರ ಎಂಬ ತೀರ್ಮಾನಕ್ಕೆ ಬಂದಿದ್ದರು. ಪೊಲೀಸರಿಗೆ ತನ್ನ ಬಗ್ಗೆ ಸಂಶಯ ಬಂದಿದೆ ಎಂದು ತಿಳಿಯುತ್ತಲೇ ಹನುಮಂತ ನಾಯ್ಕ ಊರು ಬಿಟ್ಟು ಪರಾರಿಯಾಗಿದ್ದ.
ಕೊಲೆಗಾರನ ಸುಳಿವು ಪಡೆದ ಶಿವಮೊಗ್ಗದ ತುಂಗಾನಗರ ಪೊಲೀಸರು ಆರೋಪಿ ಹನುಮಂತ ನಾಯ್ಕನ ಹುಡುಕಾಟದಲ್ಲಿದ್ದಾರೆ. ಹನುಮಂತ ನಾಯ್ಕನ ಜತೆಗೆ ಆತನ ತಂದೆ ರೂಪ್ಲಾ ನಾಯ್ಕ ಕೂಡಾ ಮನೆ ಬಿಟ್ಟು ಪರಾರಿಯಾಗಿದ್ದರು.
ಹನುಮಂತ ನಾಯ್ಕನ ಕುಟುಂಬ ವಾಸವಾಗಿರುವುದು ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ. ಘಟನೆ ನಡೆದು ಪೊಲೀಸರು ಬೆನ್ನು ಹತ್ತಲು ಶುರು ಮಾಡಿದ ಬಳಿಕ ಹನುಮಂತ ಮತ್ತು ತಂದೆ ರೂಪ್ಲಾ ನಾಯ್ಕ ತಲೆಮರೆಸಿಕೊಂಡರೆ ತಾಯಿ ಸೀತಾಬಾಯಿ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದರು.
ಸಂಬಂಧಿಕರ ಮನೆಯಲ್ಲಿದ್ದರೂ ಮಗನ ದುಷ್ಕೃತ್ಯದ ಬಗ್ಗೆ ತೀವ್ರ ಬೇಸರವನ್ನು ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ. ಘಟನೆಯಿಂದ ತೀವ್ರ ಮನನೊಂದ ಆಕೆ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಗುರುವಾರ ಬೆಳಗ್ಗೆ 10 ಗಂಟೆ ಹೊತ್ತಿಗೆ ಆತ್ಮಹತ್ಯೆಗೆ ಯತ್ನಿಸಿದ ಸೀತಾಬಾಯಿ ಅವರನ್ನು ರಕ್ಷಿಸಿದ ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೀತಾ ಬಾಯಿ ಅವರನ್ನು ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೀತಾಬಾಯಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Murder Case: ಉದ್ಯಮಿ ಅಟ್ಟಾಡಿಸಿ ನಡುರಸ್ತೆಯಲ್ಲಿ ಕೊಂದರು; ಕುಡಿದು ಸ್ನೇಹಿತನನ್ನೇ ಮುಗಿಸಿಬಿಟ್ಟರು!