ಯಾದಗಿರಿ: ಇಲ್ಲಿನ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಪದೇ ಪದೆ ಹಣ ಕೊಡುವಂತೆ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಆತನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಭಾನುವಾರ ನಡೆದಿದೆ. ರಾಜನಕೊಳುರು ಗ್ರಾಮದ ರಾಜಾಸಾಬ (38) ಹತ್ಯೆಗೀಡಾದ ವ್ಯಕ್ತಿ.
ವೀರೇಶ ಎಂಬಾತನಿಗೆ ಈ ರಾಜಾಸಾಬ ಹಣ ನೀಡುವಂತೆ ಪದೆ ಪದೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ರಾಜಾಸಾಬ ಕೇಳಿದಾಗಲೆಲ್ಲ ಹಣ ಕೊಟ್ಟು ವೀರೇಶ್ ಬೇಸತ್ತಿದ್ದ. ಶನಿವಾರ ಮತ್ತೆ ರಾಜಾಸಾಬ ಹಣ ಕೇಳಿದ್ದು, ಕೊಡದಿದ್ದರೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದನಂತೆ.
ರಾಜಾಸಾಬನ ಕಿರಿಕಿರಿಗೆ ಬೇಸತ್ತ ವೀರೇಶ್ ಶನಿವಾರ ಸಂಜೆ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದಾನೆ. ಬಳಿಕ ಕಂಠಪೂರ್ತಿ ಕುಡಿಸಿ ಬಳಶೆಟ್ಟಿಹಾಳ ಗ್ರಾಮದ ಹೊರವಲಯದ ಹೊಲಕ್ಕೆ ಕರೆದೊಯ್ದು ಕೊಡಲಿಯಿಂದ ಕುತ್ತಿಗೆ ಹಾಗೂ ತಲೆ ಭಾಗಕ್ಕೆ ಹೊಡೆದಿದ್ದಾನೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ರಾಜಾಸಾಬನನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಗುಲ್ಬರ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು ಹತ್ಯೆಯಾದ ರಾಜಾಸಾಬ್ ವಿರುದ್ಧ ವಿವಿಧ ಠಾಣೆಗಳಲ್ಲಿ ಕಳ್ಳತನ ಸೇರಿ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: Road Accident: ಅಪಘಾತ ವಲಯ ಆಗುತ್ತಿದೆಯೇ ರಾಷ್ಟ್ರೀಯ ಹೆದ್ದಾರಿಗಳು; ಪ್ರಾಣ ಬಿಟ್ಟ ಇಬ್ಬರು ಚಾಲಕರು
ಸುದ್ದಿ ತಿಳಿಯುತ್ತದ್ದಂತೆ ಘಟನಾ ಸ್ಥಳಕ್ಕೆ ಸುರಪುರ ಡಿವೈಎಸ್‌ಪಿ ಡಾ. ಮಂಜುನಾಥ ಸಿ., ಹುಣಸಗಿ ಪೊಲೀಸ್ ಠಾಣೆ ಪಿಎಸ್ಐ ಶ್ರೀಶೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ರಾಜಾಸಾಬ ಪತ್ನಿ ದೂರಿನ ಮೇರೆಗೆ ಹುಣಸಗಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಗೈದ ಆರೋಪಿಯನ್ನು 12 ಗಂಟೆಯಲ್ಲಿಯೇ ಪೊಲೀಸರು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಯಾದಗಿರಿ ಎಸ್‌ಪಿ ಡಾ. ಸಿ.ಬಿ. ವೇದಮೂರ್ತಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ