ಕಲಬುರಗಿ: ಇಲ್ಲಿನ ಜೇವರ್ಗಿ ತಾಲೂಕಿನ ಕುಕನೂರ ಗ್ರಾಮದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿದೆ. ಗುರುಬಸ್ಸಮ್ಮ ಹುಚ್ಚಡ (65) ಹತ್ಯೆಯಾದ ದುರ್ದೈವಿ. ಹಣಮಂತ ಭಜಂತ್ರಿ ಎಂಬಾತ ಆರೋಪಿಯಾಗಿದ್ದಾನೆ.
ಗುರುವಾರ ಬೆಳಗ್ಗೆ ಜಮೀನಿಗೆ ತೆರಳಿದ್ದ ಗುರುಬಸ್ಸಮ್ಮ ಸಂಜೆಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಸಂಜೆ ಜಮೀನಿಗೆ ತೆರಳಿ ನೋಡಿದಾಗ ಹತ್ಯೆಯಾಗಿರುವ ವಿಷಯ ತಿಳಿದು ಬಂದಿದೆ. ಕುಕನೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ವೃದ್ಧೆಯನ್ನು ಹತ್ಯೆ ಮಾಡಿ ಬಳಿಕ ಶವವನ್ನು ಜಮೀನಿನಲ್ಲೆ ಅರೆ ಬರೆಯಾಗಿ ಹೂತಿಟ್ಟು ಹಂತಕ ಪರಾರಿ ಆಗಿದ್ದಾನೆ.
ಪೂಜೆ ನೆಪದಲ್ಲಿ ಹತ್ಯೆ ಮಾಡಿದ ಹಂತಕ
ಅಂದಹಾಗೇ, ಗುರುಬಸಮ್ಮ ಜಮೀನಿನಲ್ಲಿ ಬೋರವೆಲ್ ಕೊರೆಸಲು ಯೋಜಿಸಿದ್ದರು. ಹೀಗಿರುವಾಗಲೇ ಊರಿಗೆ ಬೋರವೆಲ್ ಕೊರೆಸಲು ಪಾಯಿಂಟ್ ಹೇಳುವ ವ್ಯಕ್ತಿ ಹಣಮಂತ ಭಜಂತ್ರಿ ಗ್ರಾಮಕ್ಕೆ ಬಂದಿದ್ದ. ಈ ಮಾಹಿತಿ ತಿಳಿದ ಗುರುಬಸಮ್ಮ, ಹಣಮಂತನನ್ನು ತಮ್ಮ ಜಮೀನಿಗೆ ಕರೆದುಕೊಂಡು ಹೋಗಿದ್ದರು.
ಜಮೀನಿನಲ್ಲಿ ಗುರುಬಸಮ್ಮಳಿಗೆ ಒಂದು ಸ್ಥಳ ತೋರಿಸಿ ಪೂಜೆ ಮಾಡಲು ಹಣಮಂತ ಹೇಳಿದ್ದಾನೆ. ಗುರುಬಸಮ್ಮ ಬಾಗಿ ಪೂಜೆ ಮಾಡುವಾಗ, ಹಿಂಬದಿಯಿಂದ ಬಂದ ಹಣಮಂತ ತಲೆ ಮೇಲೆ ದೊಡ್ಡದಾದ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಧರಿಸಿದ್ದ ಚಿನ್ನಾಭರಣವನ್ನು ದೋಚಿ, ಮೃತದೇಹವನ್ನು ಅಲ್ಲೆ ತಗ್ಗಿನಲ್ಲಿ ಮುಚ್ಚಿ ಹಾಕಿ ಪರಾರಿ ಆಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿ ಹಣಮಂತ ಭಜಂತ್ರಿ ನಾಗರಹಳ್ಳಿ ಗ್ರಾಮದವನಾಗಿದ್ದು, ಜೀವನೋಪಾಯಕ್ಕಾಗಿ ಶಾಸ್ತ್ರ ಹೇಳುವುದು, ಬೋರವೆಲ್ ಪಾಯಿಂಟ್ ಹೇಳುತ್ತಾ ಊರೂರು ಅಲೆಯುತ್ತಿದ್ದ ಎನ್ನಲಾಗಿದೆ.
ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಯಡ್ರಾಮಿ ತಾಲೂಕಿನ ಗ್ರಾಮವೊಂದರಲ್ಲಿ ಇದೇ ರೀತಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇದೀಗ ಕುಕನೂರು ಗ್ರಾಮದಲ್ಲಿ ಮತ್ತೊಬ್ಬ ರೈತ ಮಹಿಳೆಯ ಕಗ್ಗೊಲೆಯಾಗಿದ್ದು, ಗ್ರಾಮಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: Murder Case: ಬಸ್‌ನೊಳಗೆ ನುಗ್ಗಿ ಚಾಲಕನನ್ನು ಬರ್ಬರವಾಗಿ ಕೊಚ್ಚಿ ಕೊಂದ ಹಂತಕರು
ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಹಂತಕ ಹಣಮಂತನ ಬಂಧನಕ್ಕೆ ಯಡ್ರಾಮಿ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬೀಟ್ ವ್ಯವಸ್ಥೆ ಹೆಚ್ಚಿಸಲಾಗುವುದು ಎಂದು ಎಸ್‌ಸಿ ಇಶಾ ಪಂತ್ ಹೇಳಿದ್ದಾರೆ. ಯಡ್ರಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.