Site icon Vistara News

Murder Case: ಹಳೇ ದ್ವೇಷ; ಎರಡೂವರೆ ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದ ಲಾಯರ್‌ ಸೇರಿ ಮೂವರ ಬಂಧನ

ಬೆಂಗಳೂರು ಗ್ರಾಮಾಂತರ: ಇಲ್ಲಿನ ವಿಜಯಪುರದ ಬುಲ್ಲಹಳ್ಳಿ ಬಳಿ ಜ.1ರಂದು ನಡೆದಿದ್ದ ಕೊಲೆ ಪ್ರಕರಣವನ್ನು (Murder Case) ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಲಾಯರ್‌ ನಾಗೇಶ್, ಸೋಮಶೇಖರ್ ಸೇರಿ ಮೂವರು ಬಂಧಿಯಾಗಿದ್ದಾರೆ.

ಅನಂತಪುರದ ನಾಗೇಶ್‌ ಎಂಬಾತ ಹಳೇ ದ್ವೇಷಕ್ಕೆ ಕೇವಲ ಎರಡೂವರೆ ಸಾವಿರ ರೂಪಾಯಿ ನೀಡಿ ಅಪ್ರಾಪ್ತ ಹುಡುಗರಿಗೆ ಸುಪಾರಿ ನೀಡಿದ್ದ. ಆರೋಪಿ ಸೋಮಶೇಖರ್‌ ಎಂಬಾತ ಮುತ್ಯಾಲಪ್ಪನನ್ನು ಪುಸಲಾಯಿಸಿ ಅನಂತಪುರಕ್ಕೆ ಕರೆತಂದಿದ್ದ. ಬಳಿಕ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಕಾರಿನಲ್ಲಿ ಶವವನ್ನು ವಿಜಯಪುರದ ಬುಲ್ಲಹಳ್ಳಿ ಬಳಿ ತಂದು ಎಸೆಯಲಾಗಿತ್ತು.

ಮೃತ ಮುತ್ಯಾಲಪ್ಪ

ಕ್ರಿಮಿನಲ್‌ ಮೈಂಡ್‌ ಯೂಸ್‌ ಮಾಡಿದ ಲಾಯರ್‌

ಲಾಯರ್‌ ಆಗಿದ್ದ ನಾಗೇಶ್‌ ಮೃತಪಟ್ಟವನ ಗುರುತು ಸಿಗಬಾರದೆಂದು ಕ್ರಿಮಿನಲ್‌ ಮೈಂಡ್ ಯೂಸ್ ಮಾಡಿದ್ದ. ಮೃತದೇಹದ ಮುಖವನ್ನು ಗುರುತು ಸಿಗದ ಹಾಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಲ್ಲದೆ ಆತನ ಕೈ ಬೆರಳುಗಳನ್ನು ತುಂಡರಿಸಿ ಫಿಂಗರ್ ಪ್ರಿಂಟ್ ಸಿಗದಂತೆ ನೋಡಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ. ಅದೇ ರೀತಿಯಾಗಿ ಹಂತಕರಿಗೆ ವಿವರವಾಗಿ ವಿವರಣೆಯನ್ನೂ ನೀಡಿದ್ದ. ನಾಗೇಶ್‌ ಹೇಳಿದಂತೆ ಕೊಲೆ ಮಾಡಿದ ಆರೋಪಿಗಳು ಬೆರಳುಗಳನ್ನೂ ಕಟ್‌ ಮಾಡಿಕೊಂಡು ಹೋಗಿದ್ದರು. ಆದರೆ, ಆರೋಪಿಗಳ ಅದೃಷ್ಟ ಕೆಟ್ಟಿತ್ತು, ಮುತ್ಯಾಲಪ್ಪನ ಒಂದು ಬೆರಳು ಕೊಲೆಯಾದ ಜಾಗದಲ್ಲಿ ಪೊಲೀಸರಿಗೆ ಸಿಕ್ಕಿತ್ತು. ಇದೇ ಆರೋಪಿಗಳು ಸಿಕ್ಕಿ ಬೀಳಲು ಕಾರಣವಾಯಿತು.

ಇದನ್ನೂ ಓದಿ: Revanth Reddy | ಕರ್ನಾಟಕದಲ್ಲಿ ಬಿಜೆಪಿಗೆ ಸಹಕರಿಸಲು ಕಾಂಗ್ರೆಸ್‌ ನಾಯಕನಿಗೆ ಸಿಎಂ ಕೆಸಿಆರ್‌ 500 ಕೋಟಿ ರೂ. ಆಫರ್, ಕೈ ನಾಯಕನಿಂದಲೇ ಆರೋಪ

ಕೊಲೆಯಾದವನು ದರೋಡೆಕೋರ

ಕೊಲೆಯಾದ ಮುತ್ಯಾಲಪ್ಪನ ಮೇಲೂ 50ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಅನಂತಪುರದ ಹಲವೆಡೆ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 10 ವರ್ಷದ ಹಿಂದಿನ ಚಿಕ್ಕ ಗಲಾಟೆಯಲ್ಲಿ ನಾಗೇಶ್ ಹಾಗೂ ಮುತ್ಯಾಲಪ್ಪ ವೈರಿಗಳಾಗಿದ್ದರು. ಹೀಗಾಗಿ ಮುತ್ಯಾಲಪ್ಪನನ್ನು ಮುಗಿಸಿಬಿಡುವ ತೀರ್ಮಾನಕ್ಕೆ ಬಂದ ನಾಗೇಶ್‌ ಕೊಲೆ ಮಾಡಿಸಿ ಪರಾರಿ ಆಗಿದ್ದ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇನ್ನಷ್ಟು ವೆಬ್‌ ಸ್ಟೋರಿಸ್‌ಗಾಗಿ ಇಲ್ಲಿನ ಲಿಂಕ್‌ ಕ್ಲಿಕ್‌ ಮಾಡಿ

Exit mobile version