ದಾವಣಗೆರೆ: ಹುಟ್ಟುತ್ತಾ ಅಣ್ಣ- ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ದಾವಣಗೆರೆಯಲ್ಲಿ ಅಕ್ಷರಶಃ ಸತ್ಯವಾಗಿದೆ. ತಮ್ಮನೊಬ್ಬ ಆಸ್ತಿಗಾಗಿ (Property dispute) ಒಡಹುಟ್ಟಿದ ಅಣ್ಣನನ್ನೇ ಹತ್ಯೆ ಮಾಡಿದ್ದಾನೆ. ಹರಿಹರದ ಪ್ರಶಾಂತ್ ನಗರದ ನಿವಾಸಿ ಕೆ.ಜಿ.ಕುಮಾರ್ ಮೃತ ದುರ್ದೈವಿ. ರಾಜು ಕೊಲೆ ಆರೋಪಿ ಆಗಿದ್ದಾನೆ.
ಕೆ.ಜಿ ಕುಮಾರ್ ಹಾಗೂ ರಾಜು ಒಂದೇ ತಾಯಿಯ ಮಕ್ಕಳಲ್ಲ. ಕೆ.ಜಿ ಕುಮಾರ್ ತಂದೆ ಗುಂಡಪ್ಪನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಪುತ್ರ ಕುಮಾರ್ ಹಾಗೂ 2ನೇ ಪತ್ನಿಯ ಪುತ್ರ ರಾಜು. ಇವರಿಬ್ಬರ ನಡುವೆ ಆಗಾಗ ಆಸ್ತಿಗಾಗಿ ಕಲಹ ನಡೆಯುತ್ತಿತ್ತು. ಆಸ್ತಿ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಕೇಸು ನ್ಯಾಯಾಲಯದಲ್ಲಿತ್ತು.
ಹೀಗಿರುವಾಗ ಭಾನುವಾರ ರಾತ್ರಿ ಕುಮಾರ್‌ನನ್ನು ಅಡ್ಡಗಟ್ಟಿದ ತಮ್ಮ ರಾಜು ಮತ್ತು ಮಾರುತಿ ಎಂಬುವರು ಹಲ್ಲೆ ನಡೆಸಿದ್ದಾರೆ. ದಾರಿ ಮಧ್ಯೆ ಗಂಭೀರ ಗಾಯಗೊಂಡಿದ್ದ ಕುಮಾರ್‌ನನ್ನು ಸ್ಥಳೀಯರು ಹರಿಹರ ಆಸ್ಪತ್ರೆಗೆ ದಾಖಲಿಸಿದ್ದರು. ಇಷ್ಟಕ್ಕೆ ಸಮಾಧಾನಗೊಳ್ಳದ ಆರೋಪಿ ರಾಜು, ಆಸ್ಪತ್ರೆಗೆ ನುಗ್ಗಿ ಮತ್ತೆ ಅಣ್ಣನ ಮೇಲೆ ಹಲ್ಲೆ ನಡೆಸಿ, ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: PM Narendra Modi: ರೋಜ್‌ಗಾರ್ ಮೇಳದಲ್ಲಿ ಮೋದಿ ಭಾಷಣ; ನಿದ್ದೆಗೆ ಜಾರಿದ ತೇಜಸ್ವಿ ಸೂರ್ಯ!
ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.