Site icon Vistara News

Murder Case: ವಿದ್ಯಾರ್ಥಿ ಕೊಲೆ ಕೇಸ್‌; ಮೂಡಿಗೆರೆಯ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಗಳ ಬಂಧನ

ರೇವಾ ಕಾಲೇಜಿನ (Reva College) ವಿದ್ಯಾರ್ಥಿ ಭಾಸ್ಕರ್‌ ಜೆಟ್ಟಿ

#image_title

ಬೆಂಗಳೂರು: ರೇವಾ ಕಾಲೇಜಿನ (Reva College) ವಿದ್ಯಾರ್ಥಿಗೆ ಚಾಕು ಇರಿದು ಹತ್ಯೆ (Murder Case) ಮಾಡಿ ಪರಾರಿ ಆಗಿದ್ದ ಮತ್ತಿಬ್ಬರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಮಾಡಿ ಪರಾರಿ ಆಗಿದ್ದವರು ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದರು. ಚಾಕು ಇರಿದಿದ್ದ ಅನಿಲ್ ಮತ್ತು ಗಲಾಟೆ ಮಾಡಿದ್ದ ಮತ್ತೊಬ್ಬ ಆರೋಪಿ ಶೃಂಗ ಎಂಬಾತನನ್ನು ಬಂಧಿಸಲಾಗಿದೆ.

ಕಳೆದ 28ರಂದು ರೇವಾ ಕಾಲೇಜಿನಲ್ಲಿ ಎರಡು ದಿನಗಳ ರೇವೋತ್ಸವ ಹೆಸರಲ್ಲಿ ಕಾಲೇಜು ಫೆಸ್ಟ್‌ ಅನ್ನು ಆಯೋಜಿಸಲಾಗಿತ್ತು. ಎಲ್ಲರೂ ಖುಷಿ ಖುಷಿಯಾಗಿ ಕುಣಿದು ಕುಪ್ಪಳಿಸಿದ್ದಾಗಲೇ, ಅಲ್ಲಿ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆದು ನೆತ್ತರು ಹರಿದಿತ್ತು. ಗಲಾಟೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದುತ್ತಿದ್ದ ಗುಜರಾತ್ ಮೂಲದ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ (22) ಎಂಬಾತ ಹತ್ಯೆ ಆಗಿ ಹೋಗಿದ್ದ.

ಕಳೆದ ಏ.28 ರಂದು ಕಾಲೇಜು ಫೆಸ್ಟ್‌ನ ಕೊನೆಯ ದಿನದಂದು ಭಾಸ್ಕರ್ ಜೆಟ್ಟಿ, ಆತನ ಸ್ನೇಹಿತ ಶರತ್‌ನೊಂದಿಗೆ ಹೋಗುವಾಗ ಎದುರಿಗೆ ಆರೋಪಿ ಭರತೇಶ್, ಕುಶಾಲ್, ಗಗನ್ ರೆಡ್ಡಿ ಎಂಬ ಎರಡು ವಿದ್ಯಾರ್ಥಿಗಳ ಗುಂಪು ಎದುರು ಬದುರಾಗಿದ್ದರು. ಈ ವೇಳೆ ವಿದ್ಯಾರ್ಥಿಗಳ ಭುಜ ಪರಸ್ಪರ ತಾಕಿತ್ತು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು ಶರತ್ ಮೇಲೆ ಕುಶಾಲ್, ಭರತೇಶ್, ಗಗನ್ ರೆಡ್ಡಿ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಸ್ನೇಹಿತನ ಸಹಾಯಕ್ಕೆ ಹೋದ ಭಾಸ್ಕರ್ ಜೆಟ್ಟಿಯ ಕೈ ಹಾಗೂ ಪಕ್ಕೆಲುಬು ಭಾಗಕ್ಕೆ ಡ್ರಾಗನ್‌ನಿಂದ ಇರಿದು ಅನಿಲ್‌ ಹತ್ಯೆ ಮಾಡಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾಸ್ಕರ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಾಯಿತಾದರೂ, ಅದಾಗಲೇ ಆತ ಮೃತಪಟ್ಟಿದ್ದ.

ಪ್ರಕರಣ ಸಂಬಂಧ ಕಳೆದ ಭಾನುವಾರವೇ ಭರತೇಶ್‌ನನ್ನು ಬಂಧಿಸಲಾಗಿತ್ತು. ಕಾಲೇಜು ಕಾರ್ಯಕ್ರಮದಲ್ಲಿ ಆರೋಪಿ ಭರತೇಶ್ ಮತ್ತು ಮೃತ ಭಾಸ್ಕರ್‌ ಜೆಟ್ಟಿ ನಡುವೆ ಗಲಾಟೆ ನಡೆದಿತ್ತು. ಆದರೆ ಗಲಾಟೆಗೂ ತನಗೂ ಸಂಬಂಧವಿಲ್ಲದಿದ್ದರೂ ಅನಿಲ್‌ ಜೋಶ್‌ನಲ್ಲಿ ಏಕಾಏಕಿ ನುಗ್ಗಿ ಡ್ರ್ಯಾಗರ್‌ನಿಂದ ಭಾಸ್ಕರ್‌ ಜೆಟ್ಟಿಯ ಎದೆಗೆ ಇರಿದು ಬಿಟ್ಟಿದ್ದ. ತೀವ್ರ ರಕ್ತಸ್ರಾವವಾಗಿ ಭಾಸ್ಕರ್‌ ಕುಸಿದು ಬೀಳುತ್ತಿದ್ದಂತೆ, ಅಲ್ಲಿಂದ ಕಾರಲ್ಲಿ ಮೂಡಿಗೆರೆಗೆ ಎಸ್ಕೇಪ್‌ ಆಗಿದ್ದ ಎಂದು ತಿಳಿದು ಬಂದಿದೆ.

ಆರೋಪಿಗಳ ಸ್ನೇಹಿತನ ಫೋನ್ ಜಾಡು ಹಿಂದೆ ಬಿದ್ದ ಬಾಗಲೂರು ಪೊಲೀಸರು, ಮೂಡಿಗೆರೆಯ ಅರಣ್ಯದ ತಗ್ಗು ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಅನಿಲ್‌ನನ್ನು ಬಂಧಿಸಿಲಾಗಿದೆ. ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದ ಆರೋಪಿ ಅನಿಲ್ ಸೇರಿ ಗಲಾಟೆಯಲ್ಲಿ ಭಾಗಿಯಾಗಿದ್ದ ಶೃಂಗ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Road accident : ಬಸ್‌ ಪಲ್ಟಿ; ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ 15ಕ್ಕೂ ಹೆಚ್ಚು ಮಂದಿಗೆ ಗಾಯ

ಹುಡುಗಿ ವಿಚಾರಕ್ಕೆ ಹುಡುಗರ ಗಲಾಟೆ

ಈ ಹುಡುಗರ ಗಲಾಟೆಗೆ ಹುಡುಗಿಯೊಬ್ಬಳ ವಿಚಾರಕ್ಕೆ ನಡೆದಿದ್ದ ಕಿರಿಕ್‌ ಕಾರಣ ಎಂಬ ಆರೋಪವೂ ಇದೆ. ಆರೋಪಿ ಭರತೇಶ್‌ ಸ್ನೇಹಿತನ ಅತ್ತೆ ಮಗಳ ಮೇಲೆ ಭಾಸ್ಕರ್ ಜೆಟ್ಟಿಯ ಸ್ನೇಹಿತ ಶರತ್ ಆಟವಾಡುವಾಗ ಕ್ರಿಕೆಟ್‌ ಬಾಲ್‌ವೊಂದನ್ನು ಎಸೆದಿದ್ದ. ಇದರಿಂದ ಸಿಟ್ಟಾಗಿ ಆಕೆ ಈ ವಿಚಾರವನ್ನು ಸ್ನೇಹಿತರಾದ ಕುಶಾಲ್, ಭರತೇಶ್, ಗಗನ್ ರೆಡ್ಡಿಗೆ ಹೇಳಿದ್ದಳು. ಇದನ್ನು ಪ್ರಶ್ನೆ ಮಾಡಲು ಬಂದಾಗ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದೂ ಹೇಳಲಾಗಿದೆ.

Exit mobile version