ವಿಜಯಪುರ: ಇಲ್ಲಿನ ವಜ್ರಹನುಮಾನ ಗೇಟ್ ಬಳಿಯ ಚಾಂದಪುರ ಕಾಲೋನಿಯಲ್ಲಿ ಮೇ 6ರ ಬೆಳಗ್ಗೆ 10.30ರ ಸುಮಾರಿಗೆ ರೌಡಿಶೀಟರ್ ಹೈದರ್‌ಅಲಿ ನದಾಫ್ (35) ಎಂಬಾತನನ್ನು ಹಾಡಹಗಲೇ ಗುಂಡು ಹಾರಿಸಿ ಹತ್ಯೆ (Murder case) ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇದೀಗ ಐವರ ವಿರುದ್ಧ ದೂರು ದಾಖಲಾಗಿದೆ. ಶೇಖ್ ಅಹ್ಮದ್ ಸುನೇನಸಾಬ್ ಮೋದಿ, ಎಸ್‌ಎಸ್ ಖಾದ್ರಿ, ತನ್ವೀರಪೀರಾ ಇಕ್ಬಾಲ್‌ಪೀರಾ ಪೀರಜಾದೆ, ವಾಜೀದಪೀರಾ ಇಕ್ಬಾಲ್‌ಪೀರಾ ಪೀರಜಾದೆ, ಶಾನವಾಜ್ ದಫೇದಾರ್ ವಿರುದ್ಧ ಜಲನಗರ ಪೊಲೀಸ್ ಠಾಣೆಯಲ್ಲಿ (jalanagar police station) ಪ್ರಕರಣ ದಾಖಲಾಗಿದೆ.
ಎಲೆಕ್ಷನ್ ಟಿಕೆಟ್‌ಗಾಗಿ ಹತ್ಯೆ
ಹತ್ಯೆ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ( AIMIM Party Leader) ಜತೆಗೆ ಹೈದರ್ ನದಾಫ್ ಮಾತನಾಡಿರುವ ಆಡಿಯೊವೊಂದನ್ನು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳಿದ್ದೇ ಹೈದರ್ ಹತ್ಯೆಗೆ ಕಾರಣವಾಗಿದೆ. ನೂರಕ್ಕೆ ನೂರು ಇದೇ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೈದರ್‌ಅಲಿ ವಿಜಯಪುರ ನಗರ ಕ್ಷೇತ್ರಕ್ಕೆ ಎಂಐಎಂ ಪಕ್ಷದಿಂದ ಟಿಕೆಟ್‌ಗಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಳಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಎಐಎಂಐಎಂನ ಬೀ ಫಾರಂ ಅನ್ನು ಪಕ್ಷದ ನಾಯಕರು ಕೊಡದೆ ಇರುವ ಬಗ್ಗೆ ದೂರು ನೀಡಿರುವ ಆಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ವಿಜಯಪುರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಜತೆ ಐದು ತಿಂಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದ್ದರಿಂದ ಎಐಎಂಐಎಂ ವಿಜಯಪುರ ಜಿಲ್ಲಾಧ್ಯಕ್ಷ ತನಗೆ ಟಿಕೆಟ್ ಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ. ವಿಜಯಪುರದ ಮುಸ್ಲಿಂ ಧರ್ಮಗುರು ತನ್ವೀರ್ ಫೀರಾ ತನಗೆ ಟಿಕೆಟ್ ತಪ್ಪಿಸಿದರು ಎಂದು ಹತ್ಯೆಯಾದ ಹೈದರಅಲಿ, ಓವೈಸಿ ಜತೆಗೆ ಮಾತನಾಡಿದ ಆಡಿಯೊ ವೈರಲ್ ಆಗಿದೆ.
ನನಗೂ ಜೀವ ಭಯವಿದೆ
ವಿಧಾನಸಭೆ ಚುನಾವಣೆ ಹಿನ್ನೆಲೆ ಪೊಲೀಸರು ಲೈಸೆನ್ಸ್ ಇರುವ ಗನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಮತಾಂಧರು, ದೇಶದ್ರೋಹಿಗಳಿಂದ ನಿಮಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆಯವರು ಹೇಳಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯವರು ಆತ್ಮರಕ್ಷಣೆಗಾಗಿ ತಕ್ಷಣವೇ ಬಂದೂಕನ್ನು ವಾಪಸ್ ನೀಡಬೇಕೆಂದು ರಾಘವ ಅಣ್ಣಿಗೇರಿ ಮನವಿ ಮಾಡಿದ್ದಾರೆ.
ಜತೆಗೆ ನಗರದ ಶಾಸಕರಿಗೆ, ಕಾರ್ಪೊರೇಟರ್, ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕು. ಜೀವ ಬೆದರಿಕೆ ಇರುವವರಿಗೆ ಕೂಡಲೇ ರಕ್ಷಣೆಗಾಗಿ ಲೈಸೆನ್ಸ್ ಗನ್ ವಾಪಸ್ ಮಾಡಬೇಕೆಂದು ತಿಳಿಸಿದ್ದಾರೆ. ಜತೆಗೆ ಆಡಿಯೊ ಕುರಿತಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನನ್ನ ಗಂಡನ ಮೇಲೆ 7-8 ಸುತ್ತು ಗುಂಡು ಹಾರಿಸಿದರು
ಹತ್ಯೆ ನಡೆದ ಸಂಬಂಧ ಹೈದರ್‌ಅಲಿ ನದಾಫ್ ಅವರ ಪತ್ನಿ ನಿಶಾದ್ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ನನ್ನ ಪತಿ ಹೈದರ್ ಕಾರಲ್ಲಿ ಮುಂದೆ ಹೋಗುತ್ತಿದ್ದರು. ನಾನು ಅವರಿಂದ ಸ್ವಲ್ಪ ಹಿಂದೆಯೇ ಬರುತ್ತಿದ್ದೆ. ಈ ವೇಳೆ ಬೈಕ್‌ನಲ್ಲಿ ಬಂದ ಶೇಖ್ ಅಹಮ್ಮದ್ ಮೋದಿ, ನ್ಯಾಯವಾದಿ ಎಸ್ಎಸ್ ಖಾದ್ರಿ ಬಂದು ಮಾತನಾಡಿಸುತ್ತಾ ನಿಂತಿದ್ದರು.
ಈ ವೇಳೆ ಶೇಖ್ ಅಹಮ್ಮದ್ ಮೋದಿ ಏಕಾಏಕಿ ಮಚ್ಚಿನಿಂದ ನನ್ನ ಪತಿ ತಲೆಗೆ ಹೊಡೆದರು. ಆಗ ನನ್ನ ಪತಿ ಓಡಿ ನನ್ನ ಬಳಿ ಬರುವಾಗ ಹಿಡಿದುಕೊಂಡರು. ಆತನ ಕೈಯ್ಯಲ್ಲಿದ್ದ ಪಿಸ್ತೂಲ್ ಅನ್ನು ನ್ಯಾಯವಾದಿ ಎಸ್.ಎಸ್. ಖಾದ್ರಿಗೆ ಕೊಟ್ಟು ಶೂಟ್ ಮಾಡು ಎಂದರು. ಆಗ ಎಸ್‌ಎಸ್ ಖಾದ್ರಿ 6 ರಿಂದ 8 ಸುತ್ತು ಗುಂಡು ಹಾರಿಸಿದ. ಈ ವೇಳೆ ನನ್ನ ಪತಿ ನೆಲದಲ್ಲೇ ಕುಸಿದು ಬಿದ್ದರು ಎಂದು ಕಾರ್ಪೊರೇಟರ್ ನಿಶಾತ್ ನದಾಫ್ ವಿವರಿಸಿದರು.
ಇದನ್ನೂ ಓದಿ: Weather Report: ಮುಂದಿನ ಎರಡು ದಿನ ರಾಜ್ಯದಲ್ಲಿ ಗುಡಗು ಸಹಿತ ಜೋರು ಮಳೆ; ಬೆಂಗಳೂರಲ್ಲೂ ಇದೆ ಮಳೆಯಾಟ
ಇನ್ನು ಗುಂಡು ಹಾರಿಸುವಾಗ ಧರ್ಮಗುರು ತನ್ವೀರ್ ಪೀರಾ ಪೀರಜಾದೆ, ಧರ್ಮಗುರು ಸಹೋದರ ವಾಜೀದ್ ಪೀರಾ ಪೀರಜಾದೆ, ಶಾನವಾಜ್ ದಫೇದಾರ ಆತನನ್ನು ಬಿಡಬೇಡಿ, ಗುಂಡು ಹಾರಿಸಿ ಕೊಲೆ ಮಾಡಿ ಎಂದು ಪ್ರಚೋದನೆ ನೀಡಿದರು. ಫೈರಿಂಗ್ ಮಾಡಿ ಅಲ್ಲಿಂದ ಅವರು ಬೈಕ್ ಹಾಗೂ ಕಾರಿನಲ್ಲಿ ಪರಾರಿಯಾದರು. ಅದಾಗಲೇ ನನ್ನ ಪತಿಯ ನಾಡಿ ಬಡಿತ, ಎದೆ ಬಡಿತ ನಿಂತು ಹೋಗಿತ್ತು. ಗಾಬರಿಯಾಗಿ ನಾನು ನಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಇದೆಲ್ಲ ಪಾಲಿಕೆಯ ಚುನಾವಣೆ ಕಾರಣದಿಂದ ನಡೆದಿದೆ. ವಿಧಾನಸಭಾ ಚುನಾವಣೆಗಾಗಿ ಇಷ್ಟೆಲ್ಲ ಭದ್ರತೆಯಿದ್ದರೂ ಕೊಲೆಗಾರರಿಗೆ ಪಿಸ್ತೂಲ್ ಎಲ್ಲಿಂದ ಬಂತು? ಈ ಕುರಿತು ಪೊಲೀಸರು ತನಿಖೆ ನಡೆಸಿ ನನಗೆ ನ್ಯಾಯ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.