ಬೆಂಗಳೂರು: ನಗರದ ಉತ್ತರಹಳ್ಳಿಯ ಸ್ಪೈಸ್ ಬಾರ್‌ವೊಂದರಲ್ಲಿ ಭಾನುವಾರ ರಾತ್ರಿ ರೌಡಿಶೀಟರ್‌ಗಳ (Murder Case) ನಡುವೆ ನಡೆದ ಘರ್ಷಣೆಯು ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಹತ್ಯೆಯಾದ ರೌಡಿಶೀಟರ್ ನನ್ನು ಶಿವರಾಜ್ ಎಂದು ಗುರುತಿಸಲಾಗಿದೆ.
ರೌಡಿಶೀಟರ್ ಶಿವರಾಜ್ ಮತ್ತು ಮಂಜ ಅಲಿಯಾಸ್ ಪೋಲಾರ್ ಎಂಬಾತನೊಂದಿಗೆ ಭಾನುವಾರ ರಾತ್ರಿ ಬಾರ್‌ಗೆ ತೆರಳಿದ್ದರು. ಈ ವೇಳೆ ಕಂಠಪೂರ್ತಿ ಕುಡಿದು ಯಾವುದೊ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿ, ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಒಬ್ಬರಿಗೊಬ್ಬರು ಕುಡಿದ ಮತ್ತಿನಲ್ಲಿ ಬಡಿದಾಡಿಕೊಂಡಿದ್ದು, ಸಿಟ್ಟಿಗೆದ್ದ ಮಂಜ ಶಿವರಾಜ್‌ನ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ.
ಇದರಿಂದ ತೀವ್ರ ಗಾಯಗೊಂಡಿದ್ದ ಶಿವರಾಜ್ ಅಲ್ಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ಅಲ್ಲಿಂದ ಬಾರ್ ಸಿಬ್ಬಂದಿ ಶಿವರಾಜ್‌ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇತ್ತ ಹತ್ಯೆ ಮಾಡಿದ ಮಂಜ ಅಲಿಯಾಸ್ ಪೋಲಾರ್ ಪರಾರಿ ಆಗಿದ್ದಾನೆ. ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಹತ್ಯೆ, ನಾಲ್ಕು ದಿನದ ಬಳಿಕ ಪತ್ತೆ
ಬೆಂಗಳೂರು: ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯೊಬ್ಬರನ್ನು ಮನೆಯೊಳಗೇ ಕೊಲೆ ಮಾಡಲಾಗಿದ್ದು (woman murder), ನಾಲ್ಕು ದಿನಗಳ ಬಳಿಕ ಈ ಕೃತ್ಯ ಪತ್ತೆಯಾಗಿದೆ.
ಕೆ.ಆರ್ ಪುರಂನ ಟಿ.ಸಿ ಪಾಳ್ಯದಲ್ಲಿ ಈ ಬರ್ಬರ ಹತ್ಯೆ ನಡೆದಿದೆ. ಅಂಬಿಕಾ (49) ಕೊಲೆಯಾದ ಮಹಿಳೆ. ಮೂಲತಃ ಬಳ್ಳಾರಿಯವರಾದ ಮೃತ ಅಂಬಿಕಾ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಇವರ ಪತಿ ಮೃತಪಟ್ಟಿದ್ದರು. ಮಗನನ್ನು ಅಂಬಿಕಾ ವಿದ್ಯಾಭ್ಯಾಸಕ್ಕೆಂದು ತುಮಕೂರಿಗೆ ಕಳುಹಿಸಿದ್ದರು. ತಾವೊಬ್ಬರೇ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಮೂರು ದಿನದಿಂದ ಅಂಬಿಕಾ ಸುತ್ತಮುತ್ತಲಿನವರಿಗೆ ಕಾಣಿಸಿರಲಿಲ್ಲ. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಾಗಿಲು ಮುರಿದು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ದೇಹದ ಮೇಲೆ ಹರಿತವಾದ ಆಯುಧದಿಂದ ಇರಿದಿರುವುದು ಪತ್ತೆಯಾಗಿದೆ. ಕೆ.ಆರ್ ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಲಕನ ಕೊಲೆ: ಮೂವರ ಬಂಧನ, ಕುದುರೆ ಸವಾರಿಯೇ ಹತ್ಯೆಗೆ ಕಾರಣ!
ಬೆಂಗಳೂರು: ಕೆಜಿ ಹಳ್ಳಿಯಲ್ಲಿ ನಡೆದ ಅಪ್ರಾಪ್ತ ವಯಸ್ಕನೊಬ್ಬನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಏಪ್ರಿಲ್ ಮೂರರಂದು ಕೆಜಿ ಹಳ್ಳಿ ರೈಲು ಹಳಿ ಬಳಿ ಕೊಲೆ ನಡೆದಿತ್ತು. 15 ವರ್ಷದ ಬಾಲಕ ಸತೀಶ್ ಎಂಬಾತನ ಕೊಲೆಯಾಗಿತ್ತು. ಸೈಯದ್ ಶೋಯೆಬ್, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಎಂಬ ಆರೋಪಿಗಳು ಕೊಲೆ ಮಾಡಿದ್ದಾರೆ.
ಮಾಸ್ಕ್ ರಸ್ತೆಯಲ್ಲಿ ಕುದುರೆ ಇಟ್ಟುಕೊಂಡಿದ್ದ ಮೃತ ಬಾಲಕ, ಮಕ್ಕಳನ್ನು ಅದರ ಮೇಲೆ ಸವಾರಿ ಮಾಡಿಸುತ್ತಿದ್ದ. ಆರೋಪಿ ಸುಹೇಲುಲ್ಲಾ ಷರೀಫ್ ಕುದುರೆ ಮೇಲೆ ಸವಾರಿ ಮಾಡಲು ಬಂದಾಗ, ದೊಡ್ಡವರನ್ನು ಕೂರಿಸುವುದಿಲ್ಲ ಎಂದು ಬಾಲಕ ಸತೀಶ್ ಹೇಳಿದ್ದ. ಈ ವೇಳೆ ಸಿಟ್ಟಿಗೆದ್ದಿದ್ದ ಆರೋಪಿ ಬಾಲಕನ ಕೆನ್ನೆಗೆ ಹೊಡೆದು ಹೋಗಿದ್ದ.
ಕೆಲ ದಿನಗಳ ಬಳಿಕ ಹೊಟೇಲ್ ಬಳಿ ಷರೀಫ್‌ನನ್ನು ನೋಡಿದ್ದ ಬಾಲಕ ಸತೀಶ್ ಮತ್ತು ಆತನ ಸ್ನೇಹಿತರು ಷರೀಫ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೆ ಪ್ರತೀಕಾರವಾಗಿ ಬಾಲಕನ ಕೊಲೆಗೆ ಸಂಚು ಹೂಡಿದ ಷರೀಫ್, ಏಪ್ರಿಲ್ ಮೂರರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಇತರ ಇಬ್ಬರನ್ನು ಕೂಡಿಕೊಂಡು ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ನಂತರ ಆತನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: Tree Fall tragedy: ಮಹಾರಾಷ್ಟ್ರದ ಅಕೋಲಾದಲ್ಲಿ ಮರ ಬಿದ್ದು 7 ಭಕ್ತರ ಸಾವು
ಸುಮಾರು 60 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.