ಬೆಂಗಳೂರು: ರಾಜಧಾನಿಯ ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಬಾದಾಮಿಯ ತಾಲೂಕಿನ ಮಂಜುನಾಥ ಬಾಳಪ್ಪ ಜಮಖಂಡಿ ಎಂಬ ಯುವಕನನ್ನು ಆತನ ಪ್ರೇಯಸಿಯೇ ತನ್ನ ಸಂಗಡಿಗರೊಂದಿಗೆ ೨೪ ಬಾರಿ ಕಲ್ಲಿನಿಂದ ಜಜ್ಜಿ ಕೊಲೆ (Murder Case) ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಬಂಧಿತಳಾಗಿದ್ದಾಳೆ. ಸರೋಜ ಬಂಧಿತ ಆರೋಪಿಯಾಗಿದ್ದಾಳೆ.
ಡಿಸೆಂಬರ್ ೪ರಂದು ರಾತ್ರಿ ಕೊಲೆ ನಡೆದಿತ್ತು. ಈ ಘಟನೆಯಲ್ಲಿ ಸರೋಜಳ ಅಕ್ಕ ಅಕ್ಕಮಹಾದೇವಿ, ಬಂಧುಗಳಾದ ಪ್ರೇಮವ್ವ, ಮಂಜುನಾಥ್, ಕಿರಣ್, ಚೆನ್ನಪ್ಪ, ಕಾಶಿನಾಥ್ ಅವರನ್ನು ಡಿ.6ರಂದು ಬಂಧಿಸಲಾಗಿತ್ತು. ಆದರೆ ಮುಖ್ಯ ಆರೋಪಿಯಾಗಿದ್ದ ಬಾಗಲಕೋಟೆ ಮೂಲದವಳಾಗಿರುವ ಸರೋಜ ನಾಪತ್ತೆಯಾಗಿದ್ದಳು. ಆಕೆ ಮೊಬೈಲ್ ಬಳಸದ ಹಿನ್ನೆಲೆಯಲ್ಲಿ ಆಕೆಯನ್ನು ಟ್ರ್ಯಾಕ್ ಮಾಡಲು ಕಷ್ಟವಾಗಿತ್ತು. ಜತೆಗೆ ಆಕೆಯ ಜತೆಗಾರರೆಲ್ಲ ಜೈಲು ಸೇರಿದ್ದರು. ಹೀಗಾಗಿ ಆಕೆ ಎಲ್ಲಿದ್ದಾಳೆ ಎನ್ನುವುದೇ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ನಗರದಲ್ಲಿ ಇಲ್ಲವೇ ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡಿರಬಹುದು ಎನ್ನುವುದು ಪೊಲೀಸರ ಲೆಕ್ಕಾಚಾರವಾಗಿತ್ತು.
ಹಣಕಾಸಿನ ವಿಚಾರಕ್ಕೆ ಕಿರಿಕ್
ಸರೋಜ ಮತ್ತು ಮೃತ ಮಂಜುನಾಥ್ ಬಹುಕಾಲದಿಂದ ಪರಿಚಿತರಾಗಿದ್ದರು. ಇಬ್ಬರ ನಡುವೆ ಹಣದ ವಿಚಾರದಲ್ಲಿ ತಗಾದೆ ಎದ್ದು ಸರೋಜಾಳನ್ನು ಕಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನ ಅಕ್ಕನ ಮನೆಗೆ ಬಂದಿದ್ದ ಸರೋಜ ಅಲ್ಲಿ ವಿಚಾರ ತಿಳಿಸಿದ್ದಾಳೆ. ಜತೆಗೆ ಹಣ ಕೊಡುತ್ತೇನೆ ಬಾ ಎಂದು ಮಂಜುನಾಥನನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಇದೊಂದು ವ್ಯವಸ್ಥಿತ ಕೊಲೆ ಎಂದು ಪೊಲೀಸರು ಮೊದಲೇ ಶಂಕಿಸಿದ್ದರು.
ಆರಂಭದಲ್ಲಿ ಕೊಲೆಯಾದವನು ಯಾರು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ, ಮಂಜುನಾಥ ಸರೋಜಳನ್ನು ಭೇಟಿಯಾಗುವ ಮುನ್ನ ಪಕ್ಕದ ಮೆಡಿಕಲ್ ಸ್ಟೋರ್‌ನಲ್ಲಿ ತನ್ನ ಮೊಬೈಲನ್ನು ಚಾರ್ಜ್‌ಗೆ ಹಾಕಲು ಕೊಟ್ಟಿದ್ದರಿಂದ ಅವನ ಹಿನ್ನೆಲೆಯನ್ನು ಅರಿಯುವುದು ಸುಲಭವಾಯಿತು. ಕೊಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದವು. ಇದನ್ನು ಆಧರಿಸಿ ಎರಡೇ ದಿನದಲ್ಲಿ ಕೊಲೆಗಾರರ ಬಂಧನವೂ ಆಯಿತು. ಆದರೆ, ಸರೋಜ ಮಾತ್ರ ನಾಪತ್ತೆಯಾಗಿದ್ದಳು.
ಎಲ್ಲಿಂದ ಶುರುವಾಯಿತು ಸರೋಜ-ಮಂಜುನಾಥನ ಪ್ರೇಮ ಕಥೆ
ಮಂಜುನಾಥ ಮತ್ತು ಸರೋಜ ಇಬ್ಬರೂ ಒಂದೇ ಊರಿನವರು. ಮಂಜುನಾಥ ಬಾಳಪ್ಪ ಜಮಖಂಡಿಯು ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ಒಂದು ಖಾನಾವಳಿ ನಡೆಸುತ್ತಿದ್ದ. ಸರೋಜಳಿಗೆ ಮದುವೆಯಾಗಿ ಪತಿ ದುಬೈಯಲ್ಲಿದ್ದ. ಟೈಮ್ ಪಾಸ್‌ಗೆಂದು ಸರೋಜ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಆಗ ಮಂಜುನಾಥ್ -ಸರೋಜರಿಗೆ ಪರಿಚಯವಾಗಿತ್ತು. ಅದು ಪ್ರೇಮಕ್ಕೆ ತಿರುಗಿ ದೈಹಿಕ ಸಂಬಂಧಗಳನ್ನು ದಾಟಿ ಹೋಗಿತ್ತು. ಕೊನೆಗೆ ಅವರಿಬ್ಬರೂ ಲಿವಿಂಗ್ ಟುಗೆದರ್ ಮಾದರಿಯಲ್ಲಿ ಜತೆಯಾಗಿ ವಾಸಿಸಲು ಶುರು ಮಾಡಿದ್ದರು. ಇದು ಇಬ್ಬರ ಕುಟುಂಬಕ್ಕೂ ಗೊತ್ತಿತ್ತು.
ಈ ವಿಚಾರ ದುಬೈನಲ್ಲಿರುವ ಸರೋಜಳ ಗಂಡನಿಗೆ ಗೊತ್ತಾಗಿತ್ತು. ಆತ ಸರೋಜಾಳ ತಾಯಿ ಪ್ರೇಮವ್ವನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದ. ಇದೆಲ್ಲದರ ನಡುವೆ ಮಂಜುನಾಥ ತನ್ನ ಖಾನಾವಳಿ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ದೊಡ್ಡ ಮೊತ್ತವನ್ನು ಸರೋಜಾಳಿಗೆ ನೀಡಿದ್ದನಂತೆ. ಈ ನಡುವೆ, ಕೆಲವು ಸಮಯದ ಹಿಂದೆ ಮಂಜುನಾಥ ಮತ್ತು ಸರೋಜಾಳ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ವೈಮನಸ್ಸಿನಿಂದ ಅವರು ದೂರಾಗಿದ್ದರು. ಮಂಜುನಾಥ ತಾನು ಕೊಟ್ಟ ಹಣದ ವಿಚಾರವನ್ನು ಮುಂದಿಟ್ಟು, ದುಡ್ಡು ವಾಪಸ್ ಕೊಡು ಎಂದು ಪೀಡಿಸಲು ಆರಂಭಿಸಿದ. ಈ ಬಗ್ಗೆ ಕುಟುಂಬದವರು ಮಂಜುನಾಥನ ಮೇಲೆ ಪೊಲೀಸರಿಗೆ ದೂರು ಕೂಡಾ ನೀಡಿದ್ದರು.
ಮಂಜುನಾಥನ ಕಿರಿಕಿರಿ ತಾಳಲಾರದೆ ಸರೋಜ ದಾವಣಗೆರೆಗೆ ಶಿಫ್ಟ್ ಆಗಿದ್ದಳು. ಆದರೆ, ಮಂಜುನಾಥ ಅಲ್ಲಿಯೂ ಬಿಡದೆ ಕಾಡಿದ್ದ ಎನ್ನಲಾಗಿದೆ. ಅಲ್ಲಿನ ಅಂಗಡಿಗೆ ಹೋಗಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಅಲ್ಲೂ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ನಡುವೆ ಮಂಜುನಾಥನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸರೋಜ ಬೆಂಗಳೂರಿಗೆ ಬಂದಳು. ಇಲ್ಲೂ ಮಂಜುನಾಥ್ ಕಿರಿಕಿರಿ ಶುರುಮಾಡಿದ್ದ. ಈ ವಿಚಾರವನ್ನು ಆಕೆ ಅಕ್ಕಮಹಾದೇವಿ ಮತ್ತು ಇತರರ ಜತೆ ಹೇಳಿಕೊಂಡಿದ್ದಳು. ಅವರೆಲ್ಲ ಸೇರಿ ಮಂಜುನಾಥನಿಗೆ ಒಂದು ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದರು. ಆಕೆಯನ್ನು ಬೆನ್ನು ಹತ್ತಿ ಬೆಂಗಳೂರಿಗೂ ಬಂದಿದ್ದ ಆತನನ್ನು ಡಿಸೆಂಬರ್ ನಾಲ್ಕರಂದು ರಾತ್ರಿ ಫೋನ್ ಮಾಡಿ ಕರೆಸಿಕೊಳ್ಳಲಾಗಿತ್ತು.
ಆವತ್ತು ಮಾತುಕತೆಗೆಂದು ಕರೆದಿದ್ದರೂ ಮಾತು ವಾಗ್ವಾದಕ್ಕೆ ತಿರುಗಿ ಆಕ್ರೋಶ ಹೆಚ್ಚಾಗಿತ್ತು. ಮಂಜುನಾಥ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದೆಲ್ಲ ಹೇಳಿದ್ದರಿಂದ ಸರೋಜ ಮತ್ತು ಇತರರು ಆತನನ್ನು ನೆಲಕ್ಕೆ ಉರುಳಿಸಿ ಹಲ್ಲೆ ಮಾಡಿದ್ದರು. ಬಳಿಕ ೨೪ ಬಾರಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು.
ತಾಯಿಗೆ ಕರೆ ಮಾಡಿದ್ದ ಮಂಜುನಾಥ್
ಮಂಜುನಾಥ ತಾನು ಸರೋಜಾಳನ್ನು ನೋಡಲು ಹೋಗುತ್ತಿರುವುದಾಗಿ ತಾಯಿಗೆ ಫೋನ್ ಮಾಡಿ ತಿಳಿಸಿದ್ದ. ತನಗೆ ಏನಾದರೂ ಆದರೆ ಮಾಗಡಿ ರಸ್ತೆಯಲ್ಲಿರುವ ಸರೋಜಾಳನ್ನೇ ಸಂಪರ್ಕಿಸಿ ಎಂದು ವಿಳಾಸ ಕೂಡಾ ಕೊಟ್ಟಿದ್ದ. ಹೀಗಾಗಿ ಇದೊಂದು ಅಕ್ರಮ ಸಂಬಂಧ, ಹಣಕಾಸು ವ್ಯವಹಾರ, ಮಾನಸಿಕ ಹಿಂಸೆ ಸೇರಿದ ವ್ಯವಸ್ಥಿತ ಕೊಲೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಸವಾಲಾಗಿದ್ದ ಸರೋಜಾಳನ್ನು ಹುಡುಕಿ ಕಾನೂನಿಗೆ ವಹಿಸಿದ್ದಾರೆ.
ಇದನ್ನೂ ಓದಿ | Rashmika Mandanna | ಎಲ್ಲವೂ ಪ್ರಾರಂಭವಾದ ದಿನ ಎಂದು ʻಕಿರಿಕ್ ಪಾರ್ಟಿʼ ಸಿನಿಮಾ ಪೋಸ್ಟರ್ ಹಂಚಿಕೊಂಡ ರಶ್ಮಿಕಾ ಮಂದಣ್ಣ!