ಬೆಂಗಳೂರು: ಒಂಟಿಯಾಗಿ ವಾಸವಿದ್ದ ಹಿರಿಯ ಭೂ ವಿಜ್ಞಾನಿಯ ಕತ್ತು ಕೊಯ್ದು ಕೊಲೆ (Murder case) ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಮೃತ ದುರ್ದೈವಿ. ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದು, ಅಕ್ರಮ ಗಣಿಗಾರಿಕೆಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೂಲತಃ ತೀರ್ಥಹಳ್ಳಿ ಮೂಲದವರಾದ ಪ್ರತಿಮಾ ಕುವೆಂಪು ವಿವಿಯಲ್ಲಿ ಎಂ.ಎಸ್.ಸಿ ಮಾಡಿದ್ದರು. ಸರಿ ಸುಮಾರು 13 ವರ್ಷಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಭೂ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಕೆಲಸ ವಿಚಾರದಲ್ಲಿ ಪ್ರತಿಮಾ ಡೈನಾಮಿಕ್ ಲೇಡಿಯಾಗಿದ್ದರು, ಯಾವುದಕ್ಕೂ ಹೆದರುತ್ತಿರಲಿಲ್ಲ. ಕಾನೂನು ಬಾಹಿರವಾಗಿ ಯಾರೇ ಕ್ರಷರ್‌ಗಳನ್ನು ನಡೆಸಿದರೂ, ದಾಳಿ ಮಾಡಿ ಕ್ರಮಕೈಗೊಳ್ಳುತ್ತಿದ್ದರು. ಮಾತ್ರವಲ್ಲದೆ ಸರ್ಕಾರಕ್ಕೆ ಬರಬೇಕಾದ ರಾಯಲ್ಟಿ ಕಟ್ಟಿಸುವ ಮೂಲಕ ಇಲಾಖೆಯ ಒಳ್ಳೆ ಹೆಸರು ಮಾಡಿದ್ದರು. ಯಾವುದೇ ಅಕ್ರಮಕ್ಕೂ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಪ್ರತಿಮಾ ಆಪ್ತ ದಿನೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮನೆಯಲ್ಲಿ ಕಳ್ಳತನವಾಗಿಲ್ಲ
ಘಟನೆ ಸಂಬಂಧ ಪ್ರತಿಮ ಸಹೋದರ ಪ್ರತೀಶ್ ಮಾತನಾಡಿದ್ದಾರೆ. ಪ್ರತಿಮಾ ತುಂಬಾ ಧೈರ್ಯವಂತೆ. ಅವರು ಕೊಲೆಯಾಗಿದೆ ಎಂದರೆ ನಂಬಲು ಆಗುತ್ತಿಲ್ಲ. ಆಕೆಗೆ ದಿನ ಫೋನ್ ಕಾಲ್ ಮಾಡಿ ಮಾತಾಡುತ್ತಿದ್ದವಿ. ಭಾನುವಾರ ಮದುವೆಗೆ ಹೋಗಬೇಕಿತ್ತು. ಹೀಗಾಗಿ ನಿನ್ನೆ ಶನಿವಾರ ರಾತ್ರಿಯಿಂದ ಕಾಲ್ ಮಾಡುತ್ತಿದ್ದೆ, ಆದರೆ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಮತ್ತೆ ಕಾಲ್ ಮಾಡಿದಾಗಲು ರಿಸೀವ್ ಮಾಡಲಿಲ್ಲ. ಹೀಗಾಗಿ ಕೆಳಗಿನ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದೀವಿ. ಅವರು ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ ಎಂದರು.
ಕೆಲಸದ ವಿಚಾರವಾಗಿ ಏನು ಸಮಸ್ಯೆ ಇರಲಿಲ್ಲ. ಆ ತರ ಇದ್ದಿದ್ದರೆ ನನ್ನ ಬಳಿ ಹೇಳಿಕೊಳ್ಳುತ್ತಿದ್ದಳು. ಮನೆಯಲ್ಲಿ ಏನು ಕಳ್ಳತನ ಆಗಿಲ್ಲ. ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ, ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗುತ್ತೆ ಎಂದರು.
ಇದನ್ನೂ ಓದಿ: Murder Case : ಚಾಕುವಿನಿಂದ ಇರಿದು ಗಣಿ ಇಲಾಖೆ ಉಪ ನಿರ್ದೇಶಕಿಯ ಬರ್ಬರ ಹತ್ಯೆ!
2 ದಿನಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ ಕಾರು ಚಾಲಕ!
ಪ್ರಕರಣ ಸಂಬಂಧ ಸ್ಥಳಕ್ಕೆ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ದಯಾನಂದ್, ಪ್ರತಿಮಾ ಅವರು ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದರು. ಪ್ರತಿಮಾ ಒಳ್ಳೆ ಅಧಿಕಾರಿ ಆಗಿದ್ದರು, ಎಲ್ಲಾ ಸಭೆಗಳಲ್ಲೂ ಕಡತಗಳ ಜತೆಗೆ ಹಾಜರಾಗುತ್ತಿದ್ದರು.
ಕಳೆದ ಒಂದು ತಿಂಗಳ ಹಿಂದೆ ಎಲ್ಲಾ ಅಧಿಕಾರಿಗಳನ್ನು ಕರೆದು ಸ್ವಲ್ಪ ಜೋರು ಮಾಡಿದ್ದೆ. ಅಕ್ರಮವಾಗಿ ಜಲ್ಲಿಕಲ್ಲು, ಕಲ್ಲು ಗಣಿಗಾರಿಕೆ ನಡೀತಿದೆ, ತಮಿಳುನಾಡಿನಿಂದ ತರುತ್ತಿದ್ದಾರೆ. ಈ ಬಗ್ಗೆ ಗಮನಿಸಿ ಎಂದು ಸೂಚಿಸಿದ್ದೆ. ಕೆಲಸದ ಸಂಬಂಧ ಯಾವುದೇ ಸಮಸ್ಯೆ ಇರಲಿಲ್ಲ. ಆ ರೀತಿಯ ಯಾವುದೇ ದೂರು ಬಂದಿಲ್ಲ. ತಮಿಳುನಾಡಿನ ಕಡೆಗೆ ಬರುವ ಲಾರಿಗಳನ್ನು ತಡೆಯಲು ಹೇಳಿದ್ದೆ. ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ ಎಂದರು.
ಪ್ರತಿಮಾ ಜತೆ ಸಾಕಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದ ಚಾಲಕ ಕಳೆದ ಎರಡು ದಿನಗಳ ಹಿಂದೆ ಕೆಲಸ ಬಿಟ್ಟಿದ್ದಾನೆ. ಇದೀಗ ಆತನಿಂದಲು ಸಹ ಪೊಲೀಸರು ಮಾಹಿತಿ ಪಡೆಯುಲು ಮುಂದಾಗಿದ್ದಾರೆ. ಜತೆಗೆ ಕಚೇರಿಯಲ್ಲಿರುವ ಇಂಜಿನಿಯರ್, ಸಿಬ್ಬಂದಿ ವಿಚಾರಣೆ ಮಾಡಲಿದ್ದಾರೆ ಎಂದರು. ಕಳೆದ ಎರಡು ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಚಾಲಕನಿಂದಲೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿನ್ನೆ ಯಾರೊಟ್ಟಿಗೆ ಮಾತನಾಡಿದ್ದರೂ ಎಂದು ಕಾಲ್ ಡಿಟೈಲ್ಸ್ ಪಡೆಯುತ್ತಿದ್ದಾರೆ ಎಂದರು.
ಹಂತಕರ ಸುಳಿವು
ನಮಗೆ ಆರೋಪಿಗಳ ಪಕ್ಕಾ ಸುಳಿವು ಇದೆ. ಕೂಡಲೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಅನುಮಾನಸ್ಪದವಾಗಿ 10ಕ್ಕೂ ಹೆಚ್ಚು ನಂಬರ್ ಟ್ರೇಸ್ ಮಾಡಿದ್ದು, 50 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿ ಕೊಲೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಬಗ್ಗೆ ಈಗಷ್ಟೇ ತಿಳಿದು ಬಂದಿದೆ. ಮಾಹಿತಿ ಸಂಗ್ರಹಿಸಲು ಸೂಚಿಸಿದ್ದೇನೆ. ಅವರು ಒಬ್ಬರೇ ವಾಸವಿದ್ದರು ಎಂದು ಗೊತ್ತಾಗಿದೆ. ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ಕ್ಲಿಕ್ ಮಾಡಿ