ಹೊಸೂರು: ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ಮಲತಂದೆಯೊಬ್ಬ ಸರಸಕ್ಕೆ ಅಡ್ಡಿಯಾದ ಮೂರು ವರ್ಷದ ಮಗುವನ್ನು (Murder Case) ಹತ್ಯೆಗೈದಿದ್ದಾನೆ. ರಂಜಿತ್ ಎಂಬಾತ ಜಗನ್ನಾಥನ್ ಎಂಬ ಮೂರು ವರ್ಷದ ಮಗುವನ್ನು ಬಿಯರ್ ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.
ಕಳೆದ ಡಿಸೆಂಬರ್ 6ರಂದು ಮಲತಂದೆ ರಂಜಿತ್ ಮಗುವಿನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ನೆಪ ಮಾತ್ರಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಬಳಿಕ ಡಿಸೆಂಬರ್ 22ರಂದು ಚಿಕಿತ್ಸೆ ಬೇಡವೆಂದು ಪುನಃ ಮನೆಗೆ ಮಗುವನ್ನು ರಂಜಿತ್ ನಂದಿನಿ ದಂಪತಿ ಕರೆತಂದಿದ್ದರು. ಆದರೆ ಡಿಸೆಂಬರ್ 25ರಂದು ಮನೆಯಲ್ಲಿ ಮಗು ಮೃತಪಟ್ಟಿತ್ತು.
ಅನುಮಾನ ಬಾರದಂತೆ ಅಂತ್ಯಕ್ರಿಯೆ
ಅಕ್ಕಪಕ್ಕದವರಿಗೆ ಅನುಮಾನ ಬರದಂತೆ ಮಗುವಿನ ಅಂತ್ಯಕ್ರಿಯೆಯನ್ನು ರಂಜಿತ್ ಹಾಗೂ ನಂದಿನಿ ದಂಪತಿ ಮುಗಿಸಿದ್ದರು. ಈ ಮಧ್ಯೆ ಕೆಲ ದಿನಗಳ ಬಳಿಕ ನಂದಿನಿಯ ತಾಯಿ ವಲ್ಲಿ ಮನೆಗೆ ಬಂದಿದ್ದರು. ಮಗು ಇಲ್ಲದ ಬಗ್ಗೆ ಪ್ರಶ್ನೆ ಮಾಡಿದಾಗ, ನಂದಿನಿ ಸರಿಯಾಗಿ ಉತ್ತರಿಸಿರಲಿಲ್ಲ. ಅನುಮಾನಗೊಂಡು ಹೊಸೂರಿನ ಆಟ್ಕೊ ಠಾಣೆಗೆ ದೂರು ದಾಖಲಿಸಿದ್ದರು.
ಹತ್ಯೆ ವಿಚಾರ ಬಹಿರಂಗ
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಗಿಳಿದು ನಂದಿನಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಡೆದ ಎಲ್ಲವನ್ನು ಹೇಳಿ, ಮಗುವಿನ ಶವವನ್ನು ಹೊಸೂರಿನ ಗೋಕುಲ್ ನರದ ಸ್ಮಶಾನದಲ್ಲಿ ಹೂತಿಟ್ಟಿದ್ದಾಗಿ ತಾಯಿ ನಂದಿನಿ ತಪ್ಪೊಪ್ಪಿಕೊಂಡಿದ್ದಾಳೆ. ಜಿಲ್ಲಾಧಿಕಾರಿ ಹಾಗೂ ಪೊಲೀಸರ ಸಮ್ಮುಖದಲ್ಲಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸದ್ಯ ನಂದಿನಿ ಹಾಗೂ ರಂಜಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಅನಾರೋಗ್ಯದಿಂದ ಮೃತಪಟ್ಟಿದ್ದ ಪತಿ
ನಂದಿನಿಗೆ ಶಕ್ತಿ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಪ್ರವೀಣ್ ಮತ್ತು ಜಗನ್ನಾಥನ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಆದರೆ ಕಳೆದ 7 ತಿಂಗಳ ಹಿಂದೆ ಅನಾರೋಗ್ಯದಿಂದ ಪತಿ ಶಕ್ತಿ ಮೃತಪಟ್ಟಿದ್ದರು. ಪತಿ ಸಾವಿನ ಬಳಿಕ ನಂದಿನಿ, ಹೂಸೂರಿನ ಪಾರ್ವತಿ ನಗರ ವಾಸಿ ರಂಜಿತ್ (35) ಎಂಬಾತನೊಂದಿಗೆ ಸಂಸಾರ ಶುರು ಮಾಡಿದ್ದರು.
ಇದನ್ನೂ ಓದಿ | Nirani Vs Yathnal | ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ: ಕಣ್ಣೀರು ಹಾಕುತ್ತಲೇ ಯತ್ನಾಳ್ ವಿರುದ್ಧ ಕಿಡಿಕಾರಿದ ನಿರಾಣಿ