ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದಿಂದ (Family dispute) ಪತಿ ಮತ್ತು ಪತ್ನಿ ನಡುವೆ ಜಗಳ ನಡೆದು ಅದು ಕೊಲೆಯಲ್ಲಿ (Murder case) ಅಂತ್ಯಗೊಂಡಿದೆ. ಪತ್ನಿಯನ್ನು ಕೊಂದ ಗಂಟ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ. ಮೂರು ದಿನಗಳ ಬಳಿಕ ವಾಸನೆ ಬರಲಾರಂಭಿಸಿದಾಗಲೇ ಈ ಕೊಲೆ ವಿಚಾರ ಬೆಳಕಿಗೆ ಬಂದಿದ್ದು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಗಂಗಾ ನಗರ ಬಡಾವಣೆಯಲ್ಲಿ ಘಟನೆ ನಡೆದಿದೆ. ಲಕ್ಷ್ಮೀ ದೇವಿ ಎಂಬವರನ್ನು ಆಕೆಯ ಪತಿ ಕೃಷ್ಣಪ್ಪ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಗೌರಿಬಿದನೂರಿನ ರಾಮಚಂದ್ರಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಕೃಷ್ಣಪ್ಪನಿಗೆ (Teacher krishnappa) ಐವತ್ತು ವರ್ಷ. ಒಳ್ಳೆಯ ಬಡಾವಣೆಯಲ್ಲಿ ದೊಡ್ಡ ಮನೆಯನ್ನೇ ಕಟ್ಟಿಸಿದ್ದಾನೆ. ಆತನಿಗೆ ಪತ್ನಿ ಲಕ್ಷ್ಮೀ ದೇವಿ (40) ಶೀಲದ ಬಗ್ಗೆ ಸಂಶಯ. ಯಾವಾಗಲೂ ಈ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಆಕೆಯ ಮಕ್ಕಳು ಬೇರೆ ಕಡೆ ಇದ್ದು, ಮನೆಯಲ್ಲಿ ಇವರಿಬ್ಬರೇ ಇದ್ದಾರೆ.
ಕಳೆದ ಭಾನುವಾರ ಮನೆಯಲ್ಲಿ ಇಬ್ಬರೇ ಇದ್ದಾಗ ಮತ್ತೊಂದು ಸುತ್ತಿನ ಜಗಳ ಶುರುವಾಗಿದೆ. ಕೃಷ್ಣಪ್ಪ ಸಿಟ್ಟಿನ ಭರದಲ್ಲಿ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ. ನಂತರ ಏನು ಮಾಡಬೇಕು ಎಂದು ತೋಚದೆ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾಗಿಯಾಗಿದ್ದಾನೆ.
ಇತ್ತ ಒಂದೆರಡು ದಿನ ಈ ಮನೆಯ ವಿಚಾರದಲ್ಲಿ ಯಾರೂ ಗಮನ ಹರಿಸಿರಲಿಲ್ಲ. ಆದರೆ, ಮಂಗಳವಾರ ವಾಸನೆ ಬರಲು ಆರಂಭಿಸಿದಾಗ ಅಕ್ಕಪಕ್ಕದ ಮನೆಯವರಿಗೆ ಸಂಶಯ ಶುರುವಾಯಿತು. ಇತ್ತ ಮನೆಯಲ್ಲಿ ಯಾರೂ ಇಲ್ಲದಿರುವುದು, ಬೀಗ ಹಾಕಿರುವುದು ಸಂಶಯವನ್ನು ಇನ್ನಷ್ಟು ಹೆಚ್ಚಿಸಿತು.
ಪೊಲೀಸರಿಗೆ ತಿಳಿಸಿದಾಗ ಅವರು ಬಂದು ಬಾಗಿಲು ಒಡೆದು ನೋಡಿದಾಗ ಒಳಗೆ ಲಕ್ಷ್ಮೀದೇವಿ ಶವವಾಗಿ ಬಿದ್ದಿದ್ದರು. ಈ ನಡುವೆ ವಿಷಯ ತಿಳಿದ ಮಕ್ಕಳು ಧಾವಿಸಿದರು. ಕಿರಿಮಗಳಾದ ಲೀಲಾ ಇದು ತಂದೆಯೇ ಮಾಡಿದ ಕೊಲೆ. ಅವರಿಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ನಡುವೆ ಕೃಷ್ಣಪ್ಪ ಒಡವೆ ವಿಚಾರದಲ್ಲೂ ಜಗಳ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಶಿಕ್ಷಕನಾಗಿದ್ದು ಕೊಂಡು ಸಮಾಜಕ್ಕೆ ಮಾದರಿಯಾಗಬೇಕಾದವನು ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಪತ್ನಿಯನ್ನೇ ಕೊಂದಿರುವುದು ಪರಿಸರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಗೌರಿಬಿದನೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಡಿ ಎಲ್ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Murder Case: ರೌಡಿ ಶೀಟರ್ ಹತ್ಯೆ, ಕುಡಿದ ಅಮಲಿನಲ್ಲಿ ಹೊಡೆದು ಕೊಂದ ಮತ್ತೊಬ್ಬ ರೌಡಿ