Site icon Vistara News

Murder case : ಭೂ ವಿಜ್ಞಾನಿ ಕೊಲೆ ರಹಸ್ಯ ಭೇದಿಸಲು ತಂಡ ರಚನೆ; ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

epartment of Mines and Geology Geologist Pratima murder case

ಬೆಂಗಳೂರು: ನ.4ರಂದು ಇಲ್ಲಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಭೂ ವಿಜ್ಞಾನಿ ಪ್ರತಿಮಾ (45) ಎಂಬುವವರ ಬರ್ಬರ ಹತ್ಯೆಯಾಗಿತ್ತು. ನ.5ರ ಬೆಳಗ್ಗೆ ಕೊಲೆ ವಿಚಾರ ಬೆಳಕಿಗೆ ಬಂದಿತ್ತು. ಸದ್ಯ ಸರ್ಕಾರಿ ಅಧಿಕಾರಿ ಪ್ರತಿಮಾ ಕತ್ತು ಕೂಯ್ದು ಹತ್ಯೆ (Murder Case) ಮಾಡಿದ್ದು ಒಬ್ಬನೇ ವ್ಯಕ್ತಿನಾ? ಪೊಲೀಸರು ಈ ಸಂಬಂಧ ಕ್ರೈಂ ಸೀನ್‌ ಅನ್ನು ರೀಕ್ರಿಯೇಟ್‌ ಮಾಡಿದ್ದಾರೆ.

ಪ್ರತಿಮಾ ಮನೆಗೆ ಬರುವುದನ್ನೇ ಕಾದು ಕುಳಿತು ಹಂತಕರು ಹತ್ಯೆ ಮಾಡಿದ್ದಾರೆ. ಚಾಲಕ ಕಿರಣ್‌ ನಿನ್ನೆ ಶನಿವಾರ ರಾತ್ರಿ 8ರ ಸುಮಾರಿಗೆ ಪ್ರತಿಮಾರನ್ನು ಮನೆಗೆ ಡ್ರಾಪ್‌ ಮಾಡಿ ಹೋಗಿದ್ದಾರೆ. ಕಾರಿನಿಂದ ಇಳಿದು ಮೆಟ್ಟಿಲೇರಿ ಬಂದಿದ್ದ ಪ್ರತಿಮಾ, ಮಳೆ ಜೋರಾಗಿ ಬರುತ್ತಿದೆ? ಹೇಗೆ ಹೋಗುತ್ತೀರಿ ಎಂದು ಕಿರಣ್‌ನನ್ನು ಕೇಳಿದ್ದಾರೆ. ಈ ವೇಳೆ ಕಿರಣ್‌ ಕಾರನ್ನು ಅಲ್ಲೆ ನಿಲ್ಲಿಸಿ ಬೈಕ್ ಮೂಲಕ ಮನೆಗೆ ತೆರಳಿದ್ದಾರೆ.

ಕೈಯಲ್ಲಿದ್ದ ಲಂಚ್ ಬಾಕ್ಸ್‌ ಅನ್ನು ಕೆಳಗೆ ಇಟ್ಟು ಬಾಗಿಲು ತೆರೆಯುತ್ತಿದ್ದಂತೆ ಹಂತಕ ದಾಳಿ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಮನೆಗೆ ಅಳವಡಿಸಿದ್ದ ಗ್ರಿಲ್ ಡೋರ್ ತೆರೆದು ವುಡ್ ಡೋರ್ ತೆರೆಯುತ್ತಿದ್ದಂತೆ ಪ್ರತಿಮಾ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕಿರುಚದಂತೆ ನೋಡಿಕೊಂಡಿದ್ದಾರೆ. ಬಳಿಕ ರೂಂನೊಳಗೆ ಎಳೆದೊಯ್ದು ಹಿಂಬದಿಯಿಂದ ಪ್ರತಿಮಾಳ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುವ ಸಾಧ್ಯತೆ ಇದೆ. ಸದ್ಯ ಎಲ್ಲ ಆಯಾಮದಲ್ಲೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ವಿಶೇಷ ತಂಡ ರಚನೆ

ಬೆಂಗಳೂರಲ್ಲಿ ಸರ್ಕಾರಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ ಸಂಬಂಧ ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈಗಾಗಲೇ ವಿಶೇಷ ತಂಡ ರಚನೆಯಾಗಿದ್ದು, ತನಿಖೆ ಚುರುಕುಗೊಂಡಿದೆ. ಒಂದು ಕಡೆ ಹಂತಕರ ಪತ್ತೆಗೆ ಶೋಧ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿಡಿಆರ್ ಮತ್ತು ಟವರ್ ಡಂಪ್ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಪ್ರತಿಮಾ ಯಾರೊಂದಿಗೆ ಮಾತನಾಡಿದ್ದು, ಅವರ ನಂಬರ್‌ನ ಕೊನೆಯ ಎಲ್ಲ ಕಾಲ್ ಡಿಟೈಲ್ಸ್ ತೆಗೆಯಲಾಗುತ್ತಿದೆ.

ಮಾತ್ರವಲ್ಲದೆ ಪ್ರತಿಮಾ ಅವರು ಕೊನೆಯದಾಗಿ ಯಾವ ಯಾವ ಕೇಸ್ ಬಗ್ಗೆ ಪರಿಶೀಲನೆ ನಡೆಸಿದ್ದರು? ಇತ್ತೀಚೆಗೆ ಎಲ್ಲಿಯಾದರೂ ರೇಡ್ ಮಾಡಿದ್ದರಾ? ಅವರ ಬಳಿ ಇದ್ದ ಎಲ್ಲಾ ಕೇಸ್ ಫೈಲ್‌ಗಳ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ಕೇಸ್‌ಗಳ ಬಗ್ಗೆ, ಅವರ ಕಚೇರಿಗೆ ಯಾರೆಲ್ಲಾ ಭೇಟಿಯಾದರು? ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: Murder Case : ಚಾಕುವಿನಿಂದ ಇರಿದು ಗಣಿ ಇಲಾಖೆ ಉಪ ನಿರ್ದೇಶಕಿಯ ಬರ್ಬರ ಹತ್ಯೆ!

ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಿದ್ದ ಪ್ರತಿಮಾ

ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಿದ್ದಕ್ಕೆ ಪ್ರತಿಮಾ ಹತ್ಯೆ ನಡೀತಾ? ಹೀಗೊಂದು ಸಹಜ ಪ್ರಶ್ನೆ ಕಾಡುತ್ತಿದೆ. ಕಳೆದ ಜುಲೈನಲ್ಲಿ ಹುಣಸೆಮಾರನಹಳ್ಳಿ ಅಕ್ರಮ ಕಲ್ಲು ಗಣಿಗಾರಿಕೆ ಅಡ್ಡೆ ಮೇಲೆ ಪ್ರತಿಮಾ ದಾಳಿ ಮಾಡಿದ್ದರು. ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಕ್ವಾರಿ ಕ್ಲೋಸ್ ಮಾಡಿ ಜಿಲ್ಲಾಧಿಕಾರಿಗೆ ಪ್ರತಿಮಾ ವರದಿ ನೀಡಿದ್ದರು.

ಹುಣಸೆಮಾರನಹಳ್ಳಿ ಸರ್ವೆ ನಂ. 177 , 179ರ 4 ಎಕರೆ ಪ್ರದೇಶದಲ್ಲಿ ಸ್ಫೋಟಕಗಳನ್ನು ಬಳಸಿ ಕಲ್ಲುಬಂಡೆಗಳನ್ನು ಒಡೆದು ಗಣಿಗಾರಿಕೆ ಮಾಡಲಾಗುತ್ತಿತ್ತು. ಹಿಡುವಳಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಆರೋಪದಡಿ ದಾಳಿ ನಡೆಸಿದ್ದರು. ಸರ್ಕಾರಕ್ಕೆ ಸುಮಾರು 25 ಲಕ್ಷಕ್ಕೂ ಹೆಚ್ಚು ರಾಜಧನ ತೆರಿಗೆ ವಂಚಿಸಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ವರದಿ ನೀಡಿದ್ದರು. ಸದ್ಯ ಪ್ರತಿಮಾ ಹತ್ಯೆ ಬಳಿಕ ಅವರು ಮಾಡಿದ್ದ ಎಲ್ಲ ದಾಳಿ ಹಾಗೂ ಕಡತಗಳ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Murder Case : ಅಕ್ರಮ ಗಣಿಗಾರಿಕೆಗೆ ಬಲಿಯಾದ್ರಾ ಹಿರಿಯ ಭೂ ವಿಜ್ಞಾನಿ!

ಮನೆ ಗೃಹಪ್ರವೇಶದ ಪೂಜೆಯಲ್ಲಿ ಭಾಗಿಯಾದ ಪ್ರತಿಮಾ ಹಾಗೂ ಪತಿ ಸತ್ಯನಾರಾಯಣ

ದಾಂಪತ್ಯದಲ್ಲಿ ಬಿರುಕು?

ಪತ್ನಿ ಪ್ರತಿಮಾ ಕೊಲೆ ಸುದ್ದಿ ಕೇಳಿ ಬೆಂಗಳೂರಿಗೆ ಪತಿ ಸತ್ಯನಾರಾಯಣ ಕಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದರು. ಇವರಿಬ್ಬರ ಮಧ್ಯೆ ಕೆಲ ವರ್ಷಗಳಿಂದ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ದೂರಾಗಿದ್ದರು. ಆದರೆ ಇತ್ತೀಚೆಗೆ ಮತ್ತೆ ಒಂದಾಗಿದ್ದರು. ಹದಿನೈದು ದಿನಗಳ ಹಿಂದೆ ಊರಿನಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮಕ್ಕೂ ಪ್ರತಿಮಾ ಪತಿ ಜೊತೆಗೆ ಭಾಗಿಯಾಗಿದ್ದರು.

ಕಿಮ್ಸ್‌ ಆಸ್ಪತ್ರೆಯಿಂದ ಸ್ವಗ್ರಾಮಕ್ಕೆ ಮೃತದೇಹ ರವಾನೆ

ಪತಿ ಸ್ವಗಾಮ್ರದಲ್ಲೇ ಅಂತ್ಯಸಂಸ್ಕಾರ

2008 ಬ್ಯಾಚ್‌ನ ಅಧಿಕಾರಿಯಾದ ಪ್ರತಿಮಾ ಗ್ರೂಪ್ “ಬಿ” ದರ್ಜೆಯ ಅಧಿಕಾರಿಯಾಗಿದ್ದರು. ಪ್ರತಿಮಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಸಹದ್ಯೋಗಿಗಳು ಆಗಮಿಸಿ ಕಣ್ಣೀರು ಹಾಕಿದರು. ಸದ್ಯ ಪ್ರತಿಮಾ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಪತಿ ಸತ್ಯನಾರಾಯಣ ಅವರ ಸ್ವಗ್ರಾಮ ತೀರ್ಥಹಳ್ಳಿಯ ತುಡುಕಿಯಲ್ಲಿ ಅಂತ್ಯಸಂಸ್ಕಾರಕ್ಕೆ ನಿರ್ಧಾರ ಮಾಡಲಾಗಿದೆ.

ಎಲ್ಲ ಸರ್ಕಾರಿ ಅಧಿಕಾರಿಗಳಿಗೂ ಭದ್ರತೆ ಕೊಡುವುದು ಕಷ್ಟ!

ಭೂ ಮತ್ತು ಗಣಿ ವಿಜ್ಞಾನ‌ ಇಲಾಖೆಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ ಹಿನ್ನೆಲೆ ದಾವಣಗೆರೆಯಲ್ಲಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ. ಪ್ರತಿಮಾ ಪ್ರಕರಣದ ಬಗ್ಗೆ ಹತ್ತಾರು ಸಂಶಯಗಳಿವೆ. ಕೆಲವರು ಕೌಟುಂಬಿಕ‌ ಕಾರಣ ಇರಬಹುದು ಎಂದಿದ್ದಾರೆ. ಜತೆಗೆ ಇಲಾಖೆ ವಿಚಾರವನ್ನು ಶಂಕಿಸಲಾಗಿದೆ. ಇತ್ತೀಚೆಗೆ ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದರು ಎನ್ನಲಾಗಿದೆ. ಹೀಗೆ ಹಲವಾರು ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ‌ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು. ನಿನ್ನೆ ಇಲಾಖೆಯ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಪ್ರತಿಮಾ ಅವರು ಭಾಗಿ ಆಗಿದ್ದರು ಎಂದು ತಿಳಿಸಿದರು. ಅಧಿಕಾರಿಗಳಿಗೆ ಭದ್ರತೆ ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಎಲ್ಲರಿಗೂ ಪೊಲೀಸ್ ಭದ್ರತೆ ಕೊಡಲು ಆಗಲ್ಲ. ಈ ಪ್ರಕರಣವೇ ಬೇರೆ ತನಿಖೆ ಆಗಲಿ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version