Site icon Vistara News

Murder Case: ಮ್ಯೂಸಿಕ್‌ ಸೌಂಡ್ ಕಮ್ಮಿ ಮಾಡಿ ಎಂದಿದ್ದಕ್ಕೆ ವೃದ್ಧನ ಹತ್ಯೆ: ಮೂವರು ಟೆಕ್ಕಿಗಳು ಅರೆಸ್ಟ್‌

#image_title

ಬೆಂಗಳೂರು: ಇಲ್ಲಿನ ಹೆಚ್ಎಎಲ್ ಪೊಲೀಸ್‌ (HAL Police station) ಠಾಣಾ ವ್ಯಾಪ್ತಿಯ ವಿಜ್ಞಾನ ನಗರದಲ್ಲಿ ಕಳೆದ ಏ. 2ರಂದು ಟೆಕ್ಕಿ ಗುಂಪೊಂದು ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ಲೋಯಡ್‌ ನೇಮಯ್ಯ ಎಂಬುವವರನ್ನು ಹತ್ಯೆ (Murder Case) ಮಾಡಿತ್ತು. ಇದೀಗ ಪ್ರಕರಣ ಸಂಬಂಧ ಬಾಸುದೇವ ಸಮಂತ್‌ ರಾಯ್‌ ಹಾಗೂ ಅಭಿಷೇಕ್‌ ಸಿಂಗ್‌ ಇವರನ್ನು ಬೆಂಗಳೂರಲ್ಲಿ ಹಾಗೂ ಅನಿರುದ್ಧ್‌ ಎಂಬಾತನನ್ನು ದೆಹಲಿಯಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿದೆ.

ಕಳೆದ ಏಪ್ರಿಲ್‌ 2ರ ಬೆಳಗಿನ ಜಾವ 4.30ರ ಸುಮಾರಿಗೆ ಪಾನಮತ್ತರಾಗಿ ಕಾರಿನಲ್ಲಿ ಬಂದ ಈ ಆರೋಪಿಗಳು, ಜೋರಾಗಿ ಹಾಡು ಹಾಕಿ ನಡುರಸ್ತೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮನೆಯಿಂದ ಹೊರಬಂದ ಲೋಯಡ್‌ ನೇಮಯ್ಯನವರು ಮ್ಯೂಸಿಕ್‌ ಸೌಂಡ್‌ ಕಮ್ಮಿ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ಆಗಿ ಲೋಯಡ್‌ ನೇಮಯ್ಯನನ್ನು ಹಿಡಿದು ಎಳೆದಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೋಯಡ್‌ ನೇಮಯ್ಯ ಮೃತಪಟ್ಟಿದ್ದರು.

ಉತ್ತರಭಾರತ ಮೂಲದವರಾದ ರಾಮ ಸಮಂತ್‌ ರಾಯ್‌ ಮತ್ತು ಬಾಸುದೇವ ಸಮಂತ್‌ ರಾಯ್‌ ಇಬ್ಬರು ಸಹೋದರರಾಗಿದ್ದು, ವಿಜ್ಞಾನ ನಗರದಲ್ಲಿ ನೇಮಯ್ಯ ಮನೆ ಪಕ್ಕ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಕಳೆದ ವಾರ ವಿಕೆಂಡ್‌ ಮೂಡ್‌ನಲ್ಲಿದ್ದ ಅಣ್ಣ-ತಮ್ಮಂದಿರು ತಮ್ಮ ಸ್ನೇಹಿತರನ್ನು ಕರೆತಂದು ಕಾರಿನಲ್ಲಿ ಮ್ಯೂಸಿಕ್‌ ಸೌಂಡ್‌ ಜಾಸ್ತಿ ಇಟ್ಟು ಪಾನಮತ್ತರಾಗಿದ್ದರು.

ಈ ವೇಳೆ ಮನೇಲಿ ವಯಸ್ಸಾದ ವೃದ್ಧರು ಇದ್ದು, ಶಬ್ಧದಿಂದ ನಮಗೆ ತೊಂದರೆಯಾಗುತ್ತಿದೆ. ಮ್ಯೂಸಿಕ್ ಕಮ್ಮಿ ಮಾಡಿ ಎಂದು ಲೋಯಡ್‌ ನೇಮಯ್ಯ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದವರೇ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿ, ಎಳೆದಾಡಿದ್ದರು. ಇತ್ತ ಈ ಸಂಬಂಧ ಎರಡು ಬಣದಿಂದಲ್ಲೂ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Murder Case: ತೋಟದ ಮನೆಯಲ್ಲಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರ ಹತ್ಯೆಗೈದ ಗಂಡ

ಆದರೆ ಚಿಕಿತ್ಸೆ ಫಲಿಸದೇ ಲೋಯಡ್‌ ಮೃತಪಟ್ಟಿದ್ದು, ಇದೀಗ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಹೆಚ್ಎಎಲ್ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Exit mobile version