Site icon Vistara News

Murder Case | ತಾನು ಮದುವೆ ಆಗುವ ಹುಡುಗಿ, ಮತ್ತವಳ ತಾಯಿಯ ಅಶ್ಲೀಲ ವಿಡಿಯೊ ಅಪ್ಲೋಡ್‌: ವೈದ್ಯನ ಕೊಲೆ

doctor death

ಬೆಂಗಳೂರು: ಆತ ವೃತ್ತಿಯಲ್ಲಿ ವೈದ್ಯನಾಗಿದ್ದು, ನೋಡಲೂ ಆಕರ್ಷಕವಾಗಿದ್ದ. ಚೆನ್ನೈನಲ್ಲಿ ಸೇವೆ ಮಾಡುತ್ತಿದ್ದ. ಬೆಂಗಳೂರಿನ ಯುವತಿಯೊಬ್ಬಳ ಜತೆ ಪ್ರೀತಿ ಬೆಳೆಯಿತು. ಮನೆಯವರೆದುರು ಪ್ರಸ್ತಾಪವೂ ಆಗಿ ಮದುವೆಯೂ ನಿಶ್ಚಯವಾಯಿತು. ಆದರೆ, ಈ ಮಧ್ಯೆ ಆತ ಮಾಡಿದ ಒಂದು ಪ್ರಮಾದವು ಈಗ ಆತನ (Murder Case) ಜೀವವನ್ನೇ ತೆಗೆದಿದೆ!

ಬೇಗೂರು ಬಳಿಯ ನ್ಯೂ ಮೈಕೋ ಲೇಔಟ್‌ನಲ್ಲಿ ಪ್ರಕರಣ ನಡೆದಿದೆ. ಬೆಂಗಳೂರಿನ ಡಾ. ವಿಕಾಸ್‌ ಹಾಗೂ ಪ್ರತಿಭಾ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ನವೆಂಬರ್‌ನಲ್ಲಿ ಇವರ ವಿವಾಹ ನಿಶ್ಚಯವಾಗಿತ್ತು. ಆದರೆ, ಡಾ. ವಿಕಾಸ್‌ ಈ ಮಧ್ಯೆ ಪ್ರತಿಭಾ ಹಾಗೂ ಅವರ ತಾಯಿಯ ಅಶ್ಲೀಲ ವಿಡಿಯೊವೊಂದನ್ನು ಇನ್ಸ್ಟಾಗ್ರಾಂಗೆ ಹಾಕಿದ್ದಾನೆ ಎನ್ನಲಾಗಿದೆ. ಇದು ಪ್ರತಿಭಾ ಮನೆಯವರನ್ನು ಕೆರಳಿಸಿದೆ.

ಇನ್ಸ್ಟಾಗ್ರಾಂಗೆ ವಿಡಿಯೊ ಹಾಕಿದ್ದ ಹಿನ್ನೆಲೆಯಲ್ಲಿ ವಿಕಾಸ್‌ ಜತೆಗೆ ಪ್ರತಿಭಾ ಮನೆಯವರು ಗಲಾಟೆ ಮಾಡಿದ್ದರು. ಅಲ್ಲದೆ, ಇದರಿಂದ ತೀವ್ರವಾಗಿ ನೊಂದ ಪ್ರತಿಭಾ ತನ್ನ ಗೆಳೆಯರ ಬಳಿ ವಿಕಾಸ್‌ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಳು. ಇದರಿಂದ ಆಕ್ರೋಶಗೊಂಡ ಆಕೆಯ ಸ್ನೇಹಿತರು, ಮಾತುಕತೆ ನೆಪದಲ್ಲಿ ವಿಕಾಸ್‌ನನ್ನು ಕರೆಸಿಕೊಂಡಿದ್ದಾರೆ. ಮಾತನಾಡಲು ಬಂದ ವಿಕಾಸ್‌ ಜತೆ ಈ ವೇಳೆ ಗಲಾಟೆ ನಡೆದಿದೆ. ಪ್ರತಿಭಾ ಸ್ನೇಹಿತರಾದ ಸುಶೀಲ್, ಗೌತಮ್ ಮತ್ತು ಸೂರ್ಯ ಸಿಟ್ಟಿಗೆದ್ದು ವಿಕಾಸ್‌ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

ಗಾಯಗೊಂಡಿದ್ದ ವಿಕಾಸ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಬೇಗೂರು ಠಾಣೆ ಪೊಲೀಸರು, ಸುಶೀಲ್, ಗೌತಮ್ ಮತ್ತು ಪ್ರತಿಭಾರನ್ನು ಬಂಧಿಸಿದ್ದಾರೆ. ಸೂರ್ಯ ತಲೆಮರೆಸಿಕೊಂಡಿದ್ದು, ಆತನ ಶೋಧಕ್ಕೆ ಬಲೆ ಬೀಸಲಾಗಿದೆ.

ಇದನ್ನೂ ಓದಿ | Murder | ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಏಜೆಂಟ್‌ನ ಬರ್ಬರ ಹತ್ಯೆ

Exit mobile version