ಬೆಂಗಳೂರು: ಹಣದಾಸೆಗೆ ನೆರೆಹೊರೆಯವರು, ಪರಿಚಿತರೇ ಕೊಲೆಗಡುಕರಾದರೆ, ಯಾರನ್ನಾ ನಂಬುವುದು ಬಿಡುವುದು. ಸದ್ಯ ಬೆಂಗಳೂರಿನಲ್ಲಿ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಕಳೆದ ಜನವರಿ 4ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯ ಕತ್ತು ಹಿಸುಕಿ ಕೊಲೆ (Murder case) ಮಾಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರದ ಸಾಯಿ ಶಕ್ತಿ ಬಡಾವಣೆಯ ಗಂಗಾ ಬ್ಲಾಕ್ನಲ್ಲಿ ಘಟನೆ ನಡೆದಿತ್ತು. ನೀಲಂ (30) ಎಂಬಾಕೆ ಹತ್ಯೆಯಾಗಿದ್ದರು.
ನೀಲಂ ಪತಿ ಹಾರ್ಡ್ವೇರ್ ಶಾಪ್ ಜತೆ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರು. ಈ ವೇಳೆ ಮನೆಗೆ ನುಂಗಿ ಒಬ್ಬಂಟಿಯಾಗಿದ್ದ ನೀಲಂ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಮಧ್ಯಾಹ್ನ ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಜನೀಶ್ ಕುಮಾರ್ ಎಂಬಾತ ನೀಲಂನ ಕೊಂದು ಪರಾರಿ ಆಗಿದ್ದ. ಅಂದಹಾಗೇ ನೀಲಂ ಪತಿ ಪೇಂಟ್ ಡಿಲರ್ಶಿಪ್ ಹೊಂದಿದ್ದರೆ, ನೀಲಂ ಸಹೋದರ ಏರಿಯಾದಲ್ಲಿ ಪೇಂಟ್ ಅಂಗಡಿ ನಡೆಸುತ್ತಿದ್ದ. ಹೀಗಿದ್ದಾಗ ರಜನೀಶ್ ಕಳೆದ ಒಂದೂವರೆ ವರ್ಷಗಳ ಹಿಂದೆ ಈ ಕುಟುಂಬಕ್ಕೆ ಪರಿಚಿತನಾಗಿದ್ದ. ಪೇಂಟ್ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದ್ದಾಗ ಸಹಾಯಕ್ಕೆ ರಜನೀಶ್ನನ್ನು ಕರೆಯುತ್ತಿದ್ದರು. ನೀಲಂ ಕುಟುಂಬದ ಜತೆಗೆ ಆತ್ಮೀಯನಾಗಿದ್ದ.
ಇದನ್ನೂ ಓದಿ:Assault Case : ʻಟಿಕೆಟ್ ಕೊಡಿ ಅಜ್ಜಿʼ ಎಂದವಳ ಕೆನ್ನೆಗೆ ಬಾರಿಸಿದ ಲೇಡಿ ಕಂಡಕ್ಟರ್
ಪೇಂಟ್ ಅಂಗಡಿಯಲ್ಲಿ ವ್ಯಾಪಾರವು ಚೆನ್ನಾಗಿಯೇ ಆಗುತ್ತಿತ್ತು. ಹಣವನ್ನು ಕಂಡೊಡನೇ ಈ ರಜನೀಶ್ ಅಡ್ಡದಾರಿಗೆ ಇಳಿಯಲು ಮುಂದಾಗಿದ್ದ. ಕೊಲೆ ನಡೆದ ಹಿಂದಿನ ದಿನ ನೀಲಂ ಪತಿ ವ್ಯಾಪಾರ ಆಗಿದ್ದ ಹಣ ಮನೆಗೆ ತೆಗೆದುಕೊಂಡು ಹೋಗಿದ್ದ ಬಗ್ಗೆ ರಜನೀಶ್ ಗಮನಿಸಿದ್ದ. ಮನೆಯಲ್ಲಿ ನೀಲಂ ಒಬ್ಬಳೇ ಇದ್ದಾಗ ಕೊಂದು ಹಣ ದೋಚುವ ಪ್ಲ್ಯಾನ್ ಮಾಡಿದ್ದ.
ಅದರಂತೆ ಕಳೆದ ಗುರುವಾರ ಮಧ್ಯಾಹ್ನ ನೀಲಂ ಮನೆಗೆ ಹೋಗಿದ್ದ. ಈ ವೇಳೆ ನೀಲಂ ರಜನೀಶ್ಗೆ ಊಟ ಮಾಡಿದ್ದೀಯಾ ಎಂದು ಕೇಳಿದ್ದಾಳೆ. ಇಲ್ಲ ಎಂದಾಗ ಊಟ ಹಾಕಿ ಕೊಡಲು ಅಡುಗೆ ಮನೆಗೆ ಹೋಗಿ ತಟ್ಟೆಗೆ ಅನ್ನ ಹಾಕುತ್ತಿದ್ದಾಗ, ಅಲ್ಲೇ ಇದ್ದ ಟವಲ್ನಿಂದ ಹಿಂದಿನಿಂದ ಬಂದು ಕುತ್ತಿಗೆಗೆ ಬಿಗಿದಿದ್ದಾನೆ. ಬಳಿಕ ಹಣಕ್ಕಾಗಿ ಮನೆ ಪೂರ್ತಿ ಹುಡುಕಿದ್ದಾನೆ. ಆದರೆ ಅಂಗಡಿಯಿಂದ ರಾತ್ರಿ ತಂದ ಹಣವನ್ನು ಬೆಳಗ್ಗೆ ಬ್ಯಾಂಕಿಗೆ ಹಾಕಲಾಗಿತ್ತು. ಹೀಗಾಗಿ ಮನೆಯಲ್ಲಿ ಹೆಚ್ಚು ಹಣ ಸಿಕ್ಕಿರಲಿಲ್ಲ. ಬಳಿಕ ನೀಲಂ ಮೈಮೇಲಿದ್ದ ಓಲೆ ಜತೆಗೆ ಎಂಟು ಸಾವಿರ ಹಣವನ್ನು ದೋಚಿದ್ದ. ಸದ್ಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಸೆರೆಹಿಡಿದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ