ಹಾಸನ: ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಬಾಡಿಗೆ ಹಣ ಹಾಗೂ ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಕತ್ತು ಕೊಯ್ದು ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು (Murder Case) ಪೊಲೀಸರು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಹಾಸನದ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಡಿ. 24ರಂದು ಪಾರ್ವತಮ್ಮ ಎಂಬ ಮಹಿಳೆಯ ಕೊಲೆ ಆಗಿತ್ತು. ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅರಕಲಗೂಡಿನ ಶಫೀರ್ ಹಾಗೂ ಕೋಲಾರ ಜಿಲ್ಲೆಯ ಮಾಲೂರಿನ ಸೈಯ್ಯದ್ ಬಂಧಿತ ಆರೋಪಿಗಳಾಗಿದ್ದಾರೆ.
ಹೊಳೆನರಸೀಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಶಫೀರ್‌ಗೆ ೨ ವರ್ಷದ ಹಿಂದೆ ಪಾರ್ವತಮ್ಮ ಮನೆಯನ್ನು ಬಾಡಿಗೆ ನೀಡಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಬಾಡಿಗೆಯನ್ನೇ ಕೊಟ್ಟಿರಲಿಲ್ಲ. ಇದರ ಹೊರತಾಗಿ ಪಾರ್ವತಮ್ಮ ಪತಿ ರಾಜೇಗೌಡ ಅವರ ಬಳಿ ಶಫೀರ್ 1,15,000 ಹಣ ಸಾಲ ಪಡೆದಿದ್ದ. ಆದರೆ, ಬಾಡಿಗೆ ಹಣ ಹಾಗೂ ಸಾಲ ಮರುಪಾವತಿ ಮಾಡದೆ ಸತಾಯಿಸುತ್ತಿದ್ದ. ಬೇರೆ ಮನೆಯಲ್ಲಿ ಕಳೆದೊಂದು ವರ್ಷದಿಂದ ವಾಸವಿದ್ದ.
ಇತ್ತ ಬಾಡಿಗೆ ಮನೆಗೂ ಬಾರದೇ ಕರೆಂಟ್ ಬಿಲ್, ನೀರಿನ ಬಿಲ್‌ಗಳನ್ನೂ ಕಟ್ಟದೇ ಕಣ್ಮರೆಯಾಗಿದ್ದ ಶಫೀರ್ ವಿರುದ್ಧ ಕೋಪಗೊಂಡ ಪಾರ್ವತಮ್ಮ, ಶಫೀರ್ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ಹಲವು ಸಾಮಗ್ರಿಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು.
ಇದಕ್ಕೆ ಸಿಟ್ಟಾದ ಶಫೀರ್ ಸ್ನೇಹಿತರ ಜತೆ ಸೇರಿ ಪ್ಲ್ಯಾನ್ ಮಾಡಿ ತನ್ನ ಸ್ನೇಹಿತನೊಂದಿಗೆ ಬಂದು ಪಾರ್ವತಮ್ಮ ಅವರನ್ನು ಕೊಲೆ ಮಾಡಿದ್ದಾನೆ. ಆ ವೇಳೆ ಪಾರ್ವತಮ್ಮ ಅವರ ಪತಿ ಬೆಂಗಳೂರಿಗೆ ಹೋಗಿದ್ದನ್ನು ಗೊತ್ತುಪಡಿಸಿಕೊಂಡು ಬಂದು ಕೊಲೆ ಮಾಡಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಬಂಧಿತರಿಂದ 48 ಗ್ರಾಂ ತೂಕದ ಒಡವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Vakri Budh 2022 | ನಾಳೆ ಬುಧನ ವಕ್ರಿ ಸಂಚಾರ; ಯಾವ ರಾಶಿಯ ಮೇಲೆ ಏನು ಪರಿಣಾಮ?