ಬೆಂಗಳೂರು: ಪ್ರಾಣಕ್ಕೆ ಪ್ರಾಣವಾಗಿದ್ದವಳ ಪ್ರಾಣ ತೆಗೆದ ಆರೋಪಿ ಪ್ರಶಾಂತ್ ಪೊಲೀಸರ ಮುಂದೆ ತನ್ನ ಪ್ರೇಮ್ ಕಹಾನಿಯನ್ನು ಹೇಳಿಕೊಂಡಿದ್ದಾನೆ. ಕೋಪದ ಕೈಗೆ ಬುದ್ಧಿ ಕೊಟ್ಟವನು ಪ್ರೀತಿಸಿದವಳ ಅನುಮಾನಿಸಿ ಕತ್ತು ಕೊಯ್ದು (Murder Case) ಈಗ ಜೈಲುಪಾಲಾಗಿದ್ದಾನೆ.
ಕಳೆದ ಏ.14ರ ರಾತ್ರಿ ಬರ್ತ್‌ಡೇ ಕೇಕ್ ಕತ್ತರಿಸಿದ ಬಳಿಕ ಪ್ರೇಯಸಿಯ ಕೊರಳು ಕತ್ತರಿಸಿ ಹತ್ಯೆ ಮಾಡಿದ ಘಟನೆ ಲಗ್ಗೆರೆಯಲ್ಲಿ ನಡೆದಿತ್ತು. ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯಾ (24) ತನ್ನ ದೂರದ ಸಂಬಂಧಿಯೇ ಆಗಿದ್ದ ಪ್ರಶಾಂತ್ ಎಂಬಾತನನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಳು.
ಈ ಮಧ್ಯೆ ಕಳೆದ ಮಂಗಳವಾರ (ಏ.11) ನವ್ಯಾಳ ಹುಟ್ಟುಹಬ್ಬ ಇತ್ತು. ಆದರೆ, ಅಂದು ಬ್ಯುಸಿ ಇದ್ದ ಪ್ರಶಾಂತ್ ಶುಕ್ರವಾರ (ಏ.14) ರಾತ್ರಿ ನವ್ಯಾಳಿಗೆ ಸರ್ಪ್ರೈಸ್ ಕೊಡುವ ಉದ್ದೇಶದಿಂದ ಇಡೀ ಕೋಣೆಯನ್ನು ಹುಟ್ಟುಹಬ್ಬಕ್ಕಾಗಿ ಅಲಂಕರಿಸಿದ್ದ. ಇಬ್ಬರು ಖುಷಿ ಖುಷಿಯಾಗಿಯೇ ಬರ್ತ್‌ಡೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಬಳಿಕ ಇಬ್ಬರು ರೂಂನಲ್ಲಿ ಸಂತೋಷದಿಂದ ಕಾಲಕಳೆದಿದ್ದರು.
ಈ ನಡುವೆ ನವ್ಯಾಳ ನಡತೆ ಬಗ್ಗೆ ಪ್ರಶಾಂತ್ ಅನುಮಾನಿಸುತ್ತಿದ್ದ. ಬಾತ್‌ರೂಂಗೆಂದು ನವ್ಯಾ ಹೋದಾಗ ಜತೆಗೆ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದಳು. ಇದು ಆತನ ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು. ಹೊರಗೆ ಬಂದವಳನ್ನು ಮೊಬೈಲ್ ಕೊಡುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ನವ್ಯಾಳ ಹತ್ಯೆಗೈಯುವ ಮೊದಲು ಪ್ರಶಾಂತ್ ಹರಿತವಾದ ಚಾಕುವಿನಿಂದ ಕತ್ತು ಕೊಯ್ದುಕೊಳ್ಳುವುದಾಗಿ ಬೆದರಿಸಿದ್ದಾನೆ. ಆಕೆ ಪ್ರತಿರೋಧ ತೋರದೇ ಸುಮ್ಮನಿದ್ದಾಗ ರೊಚ್ಚಿಗೆದ್ದು ಆಕೆಯನ್ನೇ ಹತ್ಯೆ ಮಾಡಿದ್ದಾನೆ.
ಇವರಿಬ್ಬರ ಪ್ರೀತಿಗೆ ಇರಲಿಲ್ಲ ಕುಟುಂಬಸ್ಥರ ಒಪ್ಪಿಗೆ
ನವ್ಯಾ ಮತ್ತು ಪ್ರಶಾಂತ್ ದೂರದ ಸಂಬಂಧಿಗಳಾದರೂ, ಇವರಿಬ್ಬರ ಪ್ರೀತಿಗೆ ನವ್ಯಾ ಕುಟುಂಬಸ್ಥರು ಅಡ್ಡಿಯಾಗಿದ್ದರು. ಪ್ರಶಾಂತ್ ಪದೇ ಪದೆ ಕಿರುಕುಳ ಕೊಡುತ್ತಿದ್ದಾನೆ ಎಂದು ನವ್ಯಾ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಕೂಡ ದಾಖಲು ಮಾಡಿದಾಗ, ಆತನನ್ನು ಕರೆಸಿ ಆಕೆ ಸಹವಾಸಕ್ಕೆ ಹೋಗದಂತೆ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಪ್ರಶಾಂತ್ ಕೂಡ ಆಕೆಯ ಸಹವಾಸಕ್ಕೆ ಹೋಗುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದ.
ಮೈ ತುಂಬ ಆಕೆಯ ಹಚ್ಚೆ ಹಾಕಿಸಿದ್ದ
ಈ ಘಟನೆ ಬಳಿಕ ಇಬ್ಬರು ಪರಸ್ಪರ ದೂರವೇನೂ ಆಗಿರಲಿಲ್ಲ. ಬದಲಿಗೆ ಆಗಾಗ ಭೇಟಿ ಆಗುವುದು, ಫೋನ್‌ನಲ್ಲಿ ಮಾತುಕತೆ ಮುಂದುವರಿದಿತ್ತು. ಅದೇ ರೀತಿ ಬರ್ತ್ ಡೇ ಆಚರಣೆಗೆ ಎಂದು ಕರೆದುಕೊಂಡು ಬಂದವನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಪೊಲೀಸರು ವಿಚಾರಣೆ ನಡೆಸಿದಾಗ ಪ್ರಶಾಂತ್ ನವ್ಯಾಳನ್ನು ವಿಪರೀತವಾಗಿ ಹಚ್ಚಿಕೊಂಡಿದ್ದಾಗಿ ಹೇಳಿದ್ದಾನೆ. ಆ ದಿನ ನವ್ಯಾಳ ಹತ್ಯೆ ಮಾಡಬೇಕೆಂಬ ಯಾವುದೇ ಪೂರ್ವನಿಯೋಜಿತ ಯೋಚನೆ ಇರಲಿಲ್ಲ. ಆದರೆ ಯಾವಾಗ ಆಕೆಯ ಮೊಬೈಲ್ಗೆ ಬ್ಯಾಕ್ ಟು ಬ್ಯಾಕ್ ಮೆಸೇಜ್‌ಗಳು ಬರಲು ಶುರುವಾಯಿತೋ, ಆಗಲೇ ಸಿಟ್ಟಯ ಬಂದಿತ್ತು. ನವ್ಯಾಳ ಮೇಲೆ ಪೊಸೆಸೀವ್ನೆಸ್ ಬೆಳೆಸಿಕೊಂಡಿದ್ದ ಪ್ರಶಾಂತ್, ಮೆಸೇಜ್ ತೋರಿಸುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದೇ ಹತ್ಯೆಗೆ ಕಾರಣವಾಗಿದೆ. ಇನ್ನು ತನ್ನ ಎದೆ ಮೇಲೆ ಹಾಕಿಸಿಕೊಂಡಿದ್ದ ಆಕೆಯ ಚಿತ್ರವಿದ್ದ ಹಚ್ಚೆಯನ್ನೂ ಪೊಲೀಸರಿಗೆ ತೋರಿಸಿದ್ದಾನೆ.
ಇದನ್ನೂ ಓದಿ: IPL 2023: ಐಪಿಎಲ್ಗೆ ಪದಾರ್ಪಣೆ ಮಾಡಿದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್
ಸುಮಾರು 5 ಗಂಟೆ ತನಕ ಮೃತದೇಹದೊಂದಿಗೆ ಇದ್ದ ಪ್ರಶಾಂತ್ ಅದನ್ನು ತುಂಡು ತುಂಡಾಗಿ ಮಾಡಿ ಎಸೆಯುವ ಪ್ಲ್ಯಾನ್ ಮಾಡಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆದರೆ, ಕೊನೇ ಕ್ಷಣದಲ್ಲಿ ನಿರ್ಧಾರವನ್ನು ಬದಲಿಸಿ ನೇರವಾಗಿ ರಾಜಗೋಪಾಲನಗರ ಪೊಲೀಸ್ ಠಾಣೆಗ ಹೋಗಿ ನಡೆದ ವಿಚಾರವನ್ನು ಹೇಳಿ ಸರೆಂಡರ್ ಆಗಿದ್ದಾನೆ.