ಶಿವಮೊಗ್ಗ: ಇಲ್ಲಿನ ವಿಜಯನಗರದಲ್ಲಿ ಮಹಿಳೆಯನ್ನು ಹಂತಕರು ಹತ್ಯೆ (Murder Case) ಮಾಡಿ ಪರಾರಿ ಆಗಿದ್ದಾರೆ. ಕಮಲಮ್ಮ (57) ಮೃತ ದುರ್ದೈವಿ. ಕಮಲಮ್ಮ ಅವರು ಹೊಸದುರ್ಗ ನೀರಾವರಿ ಇಲಾಖೆ ಇಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಅವರ ಪತ್ನಿಯಾಗಿದ್ದಾರೆ.
ಮಲ್ಲಿಕಾರ್ಜುನ ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಹೋದಾಗ ಈ ಕೃತ್ಯ ನಡೆದಿದೆ. ಹಂತಕರು ಕಮಲಮ್ಮ ಬಾಯಿಗೆ ಬಟ್ಟೆಯನ್ನು ತುರುಕಿ ಉಸಿರು ಗಟ್ಟಿಸಿ ಕೊಂದಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವಿವಾಹಿತೆ ಜತೆ ಲವ್ ಅಫೇರ್; ಗಂಡನಿಂದಲೇ ಕೊಲೆಯಾದ ಪೋಲಿ ಹುಡುಗ!
ಬೆಳಗಾವಿ: ವಿವಾಹಿತ ಮಹಿಳೆ (Married woman) ಜತೆಗೆ ಅಕ್ರಮ ಸಂಬಂಧ (Illicit relationship) ಇಟ್ಟುಕೊಂಡು ಯಾಮಾರಿಸುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಹಲಕಿ ಬಳಿ ನಡೆದ ಘಟನೆಯಲ್ಲಿ ಕೊಲೆಯಾದ (Murder case) ಯುವಕನೇ ರಮೇಶ್ ಗುಂಜಗಿ(24). ಇವನು ವಣ್ಣೂರ ಗ್ರಾಮದ ನಿವಾಸಿ.
ಈತ ವಿವಾಹಿತ ಮಹಿಳೆಯೊಬ್ಬಳ ಜತೆ ಇರಿಸಿಕೊಂಡಿದ್ದ ಸಂಬಂಧವೇ ಆತನ ಪ್ರಾಣಕ್ಕೆ ಎರವಾಗಿದೆ. ಹಾಗಂತ ಇದೇನು ಭಾರಿ ದೊಡ್ಡ ಲವ್ ಅಫೇರ್ (Love affair) ಅಲ್ಲ. ಆಕೆಯ ಮದುವೆಗೆ ಮುಂಚಿನ ಲವರ್ ಇವನೇನೂ ಅಲ್ಲ. ಕೇವಲ ಎರಡು ತಿಂಗಳಲ್ಲಿ ಹುಟ್ಟಿ ಬೆಳೆದ ಪ್ರೇಮ ಕಥೆಯ ಈ ಹೀರೋನನ್ನು ಮಹಿಳೆಯ ಗಂಡನೇ ವಿಲನ್ ರೂಪದಲ್ಲಿ ಬಂದು ಕೊಲೆ ಮಾಡಿದ್ದಾನೆ. ಈ ಕೊಲೆಗೆ ಆ ಮಹಿಳೆಯೂ ಸಹಕರಿಸಿದ್ದಾಳಾ? ಹೌದು ಎನ್ನುತ್ತದೆ ಪೊಲೀಸರ ತನಿಖೆ.
ಗೌಂಡಿ ಕೆಲಸ ಮಾಡುತ್ತಿದ್ದ ರಮೇಶನಿಗೆ ಎರಡು ತಿಂಗಳ ಹಿಂದೆ ಮನೆ ಪಕ್ಕದ ಸಾವಿತ್ರಿ ಎಂಬವರ ಜತೆ ಅಕ್ರಮ ಸಂಬಂಧ ಹುಟ್ಟಿಕೊಂಡಿತ್ತು. ಆಕೆ ಕೂಡಾ ಇವನ ಜತೆ ಸಹಕರಿಸುತ್ತಿದ್ದಳು. ಈ ನಡುವೆ, ಇವರಿಬ್ಬರ ನಡುವಿನ ಅಫೇರು ಅವಳ ಗಂಡ ಯಲ್ಲಪ್ಪ ಕಸೊಳ್ಳಿಗೆ ಗೊತ್ತಾಗಿತ್ತು.
ಆತ ಊರಿನಲ್ಲಿ ಪಂಚಾಯಿತಿ ಸೇರಿಸಿದ. ಪರಪುರುಷನ ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ತಪ್ಪು ಎಂದು ಪಂಚಾಯಿತಿಯಲ್ಲಿ ತೀರ್ಮಾನವಾಗಿತ್ತು. ಮಾತ್ರವಲ್ಲ, ಇಂಥ ಕೃತ್ಯಕ್ಕಾಗಿ ರಮೇಶನಿಗೆ ಎರಡೂವರೆ ಲಕ್ಷ ರೂ. ದಂಡವನ್ನು ಕಟ್ಟಲು ಸೂಚಿಸಲಾಗಿತ್ತು. ರಮೇಶ್ ದಂಡವನ್ನೂ ಪಾವತಿಸಿದ್ದ.
ಇದೆಲ್ಲ ಆದ ಬಳಿಕವೂ ರಮೇಶ್ ತನ್ನ ಕಳ್ಳಬುದ್ಧಿಯನ್ನು ಬಿಟ್ಟಿರಲಿಲ್ಲ ಎಂದು ಹೇಳಲಾಗಿದೆ. ಅವರಿಬ್ಬರ ಮಧ್ಯೆ ಮತ್ತೆ ಮತ್ತೆ ಭೇಟಿಗಳು ನಡೆಯುತ್ತಿದ್ದವು. ಇದೆಲ್ಲ ಮತ್ತೊಂದು ಸುತ್ತಿನ ಜಗಳಕ್ಕೆ ಕಾರಣವಾಗಿ ಅಂತಿಮವಾಗಿ ಸಾವಿತ್ರಿ ಗಂಡ ರಮೇಶನ ಸಂಗ ಬಿಟ್ಟು ಗಂಡ ಯಲ್ಲಪ್ಪ ಸಂಗೊಳ್ಳಿ ಜತೆಗೆ ಸೇರಿಕೊಂಡಿದ್ದಳು
ಇದೆಲ್ಲ ಘಟನೆಗಳಿಂದ ಯಲ್ಲಪ್ಪ ಸಂಗೊಳ್ಳಿ ಸಿಟ್ಟಾಗಿದ್ದ. ಇದರ ನಡುವೆ ರಮೇಶ್ ಆಗಾಗ ಅವಳಿಗೆ ಮೆಸೇಜ್ ಮಾಡುತ್ತಿರುವುದು ಆತನನ್ನು ಇನ್ನಷ್ಟು ಕೆರಳಿಸಿತ್ತು ಎನ್ನಲಾಗಿದೆ. ಈ ನಡುವೆ ಅವನು ರಮೇಶನನ್ನು ಮುಗಿಸಿಯೇ ಬಿಡುವ ಪ್ಲ್ಯಾನ್ ಮಾಡಿದ್ದಾನೆ.
ಇದನ್ನೂ ಓದಿ: Weather Report: ಕಾರವಾರದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ- ತಂಪಾದ ಇಳೆ; ಈ ಜಿಲ್ಲೆಗಳಿಗೆ ರೈನ್ ಅಲರ್ಟ್
ರಮೇಶ್ ನನ್ನು ಆತನ ಗೆಳೆಯನ ಮೂಲಕ ಕರೆಸಿಕೊಂಡ ಯಲ್ಲಪ್ಪ ಅವನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ನಡುವೆ, ಸಾವಿತ್ರಿಯೇ ಗಂಡನ ಜತೆ ಸೇರಿಕೊಂಡು ಈ ಕೊಲೆ ಮಾಡಿಸಿದ್ದಾಳೆ ಎನ್ನುವುದು ರಮೇಶನ ಕುಟುಂಬವರು ಆರೋಪಿಸಿದ್ದಾರೆ. ಯಲ್ಲಪ್ಪ, ಸಾವಿತ್ರಿ ಮತ್ತು ಆರು ಜನರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ