ತುಮಕೂರು/ ಹಾಸನ: ರೂಮಿನಲ್ಲಿ ಬೆಚ್ಚಗೆ ಮಲಗಿದ್ದವಳ ಕತ್ತು ಕೊಯ್ದು ದುಷ್ಕರ್ಮಿಗಳು (murder case) ಪರಾರಿ ಆಗಿದ್ದಾರೆ. ತುಮಕೂರಿನ ವಿದ್ಯಾನಗರದಲ್ಲಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವೀಣಾ (23) ಮೃತ ದುರ್ದೈವಿ.
ವೀಣಾ ಮೂಲತಃ ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ನಿವಾಸಿ ಆಗಿದ್ದಾರೆ. ಇನ್‌ಕ್ಯಾಪ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವೀಣಾ, ವಿದ್ಯಾನಗರದಲ್ಲಿ ಸ್ನೇಹಿತೆಯರೊಂದಿಗೆ ವಾಸವಿದ್ದಳು. ಪ್ರಿಯಕರನಿಂದಲೇ ವೀಣಾ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಹೊಸ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕನಿಗಾಗಿ ಬಲೆ ಬೀಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಹಾಸನದ ಚನ್ನರಾಯಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಚೇತನ್ ಹಲ್ಲೆಗೊಳಗಾದವರು.
ಹೌಸಿಂಗ್ ಬೋರ್ಡ್ ನಿವಾಸಿಯಾದ ಚೇತನ್, ತನ್ನ ಸ್ನೇಹಿತ ಕಿರಣ್‌ಗೆ ಬಜಾಜ್ ಫೈನಾನ್ಸ್ ಕಾರ್ಡ್‌ನಿಂದ ಸಾಲಕ್ಕೆ ಟಿವಿಯನ್ನು ಕೊಡಿಸಿದ್ದರು. ತಿಂಗಳ ಕಂತಿನ ಸಾಲ ಕಟ್ಟುವಂತೆ ಚೇತನ್ ಹಲವಾರು ಬಾರಿ ಕಿರಣ‌್‌ಗೆ ಕೇಳಿಕೊಂಡರೂ ಸಾಲ ಕಟ್ಟದೇ ಬೆಂಗಳೂರಿಗೆ ಕಾಲ್ಕಿತ್ತಿದ್ದ.
ನಿನ್ನೆ ಶುಕ್ರವಾರ ಕಿರಣ್ ಮನೆಗೆ ಬಂದಿರುವ ವಿಚಾರ ತಿಳಿದ ಚೇತನ್ ಆತನ ಬಳಿ ಹೋಗಿದ್ದಾನೆ. ಮನೆಯಿಂದ ಹೊರಗೆ ಬರುವಂತೆ ಕರೆದಾಗ, ಬಾಗಿಲು ತೆರೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇತ್ತ ಕಿರಣ್ ತಂದೆ ಶಿವಣ್ಣ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಚೇತನ್‌ಗೆ ಗಂಭೀರ ಸ್ವರೂಪವಾಗಿ ಗಾಯಗೊಂಡಿದ್ದು, ಚನ್ನರಾಯಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಆಸ್ತಿಗಾಗಿ ಮನೆ ಮಾಲೀಕರನ್ನೇ ಹತ್ಯೆ ಮಾಡಿದ ಹಂತಕರು
ಆನೇಕಲ್‌ನಲ್ಲಿ ಕಳೆದ ಜೂನ್ 1ರಂದು ದೆಹಲಿ ಮಾದರಿಯಲ್ಲಿ ಮಹಿಳೆಯ ಹತ್ಯೆ ಮಾಡಲಾಗಿತ್ತು. ಗೀತಾ (54) ಎಂಬುವವರು ತಮ್ಮ ಮನೆಯ ಬಾಡಿಗೆದಾರರಿಂದಲೇ ಹತ್ಯೆಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬನ್ನೇರುಘಟ್ಟ ಪೊಲೀಸರು ಹಂತಕರಿಗಾಗಿ ತಂಡವನ್ನು ರಚಿಸಿದ್ದರು. ಸದ್ಯ ಆರೋಪಿಗಳ ಪೈಕಿ ಬಿಹಾರ ಮೂಲದ ಇಂದಲ್ ಕುಮಾರ್ (21) ಎಂಬಾತನನ್ನು ಬಂಧಿಸಿದ್ದಾರೆ.
ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಇಂದಲ್ ಕುಮಾರ್ ಸೇರಿ 7 ಯುವಕರು, ಗೀತಾ ಅವರ ಬಾಡಿಗೆ ಮನೆಯಲ್ಲಿ ವಾಸಗಿದ್ದರು. ಈ ನಡುವೆ ಗೀತಾ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ಮಾಡಿದ್ದರು. ಪತ್ರಕ್ಕೆ ಸಹಿ ಹಾಕುವಂತೆ ಗೀತಾಳನ್ನು ಬಲವಂತ ಮಾಡಿದ್ದರು. ಒಪ್ಪದಿದ್ದಾಗ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ವಿಚಾರವು ತಿಳಿಯಬಾರೆಂದು ದೇಹವನ್ನು ತುಂಡರಿಸಿದ್ದರು. ಬಳಿಕ ತುಂಡಾರಿಸಿದ ಮೃತದೇಹ ಭಾಗಗಳನ್ನು ಪ್ಲ್ಯಾಸ್ಟಿಕ್ ಕವರ್‌ಗೆ ಎರಡು ದಿನ ಸಿಕ್ಕ ಸಿಕ್ಕ ಕಡೆ ಎಸೆದಿದ್ದರು.
ಹತ್ಯೆ ಮಾಡಿದ ನಂತರವೂ ಒಂದು ದಿನ ಕೆಲಸಕ್ಕೆ ತೆರಳಿದ್ದ ಕಿರಾತಕರು, ಶವದ ಮುಂದೆಯೇ ಊಟವನ್ನು ಮಾಡುತ್ತಿದ್ದರು. ಮೂರನೇ ದಿನ ಮನೆಯಲ್ಲಿ ಕಟ್ ಮಾಡಿದ್ದ ದೇಹದ ವಾಸನೆ ಹೆಚ್ಚಾಗುತ್ತಿದ್ದಂತೆ ಆತಂಕ ಹೆಚ್ಚಾಗಿತ್ತು. ಹೀಗಾಗಿ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ, 1 ಕಿ.ಮಿ ದೂರದಲ್ಲಿದ್ದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ತಲೆ ಹಾಗೂ ಕೈಯನ್ನು ಬಿಸಾಕಿ ಪರಾರಿ ಆಗಿದ್ದರು.
ಇದನ್ನೂ ಓದಿ:Contaminated Water: ಬಸರಿಹಾಳ, ಬಿಜಕಲ್ ಆಯ್ತು ಈಗ ಗಾವರಾಳದ 35 ಮಂದಿಗೆ ವಾಂತಿ, ಭೇದಿ; ತೀವ್ರ ಅಸ್ವಸ್ಥ
ಸದ್ಯ, ಆಸ್ತಿ ಅಲ್ಲದೆ ಬೇರೆ ಯಾವುದಾದರೂ ವಿಚಾರಕ್ಕೆ ಹತ್ಯೆ ನಡೆದಿದ್ಯಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್ ಸೇರಿ ಆರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ