ತುಮಕೂರು/ರಾಯಚೂರು: 70 ವರ್ಷದ ವೃದ್ಧೆಯ ಮೇಲೆ ಕಾಮ ಪಿಶಾಚಿಗಳು ಕಣ್ಣು ಹಾಕಿದ್ದು, ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರಿನ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ವೃದ್ಧೆಯ ಅಳಿಯನ ಸ್ನೇಹಿತರಾದ ಮಂಜುನಾಥ್ ಮತ್ತು ರಾಜೇಶ್ ಎಂಬುವವರೇ ಅತ್ಯಾಚಾರ ಮಾಡಿ ಪರಾರಿ ಆಗಿದ್ದಾರೆ.
ಮೊಮ್ಮಗಳ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಈ ಪಿಶಾಚಿಗಳು ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ವೃದ್ಧೆಯ ಅಳಿಯ ನಿದ್ದೆಗೆ ಜಾರಿದ ಸಮಯದಲ್ಲಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಪರಾರಿ ಆಗಿದ್ದಾರೆ ಎನ್ನಲಾಗಿದೆ. ಅಸ್ವಸ್ಥೆಯಾಗಿದ್ದ ವೃದ್ಧೆಗೆ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಪರಾರಿ ಆಗಿರುವ ಮಂಜುನಾಥ್ ಮತ್ತು ರಾಜೇಶ್ ವಿರುದ್ಧ ಸಂತ್ರಸ್ತೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಯಚೂರಿನಲ್ಲಿ ಪರಿಚಯಸ್ಥರಿಂದಲೇ ಗ್ಯಾಂಗ್ ರೇಪ್
ರಾಯಚೂರಿನ ಸಿಂಧನೂರು ತಾಲೂಕಿನ ನಾಲ್ಕನೇ ಮೈಲಿಯಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ರುಕ್ಕಮ್ಮ (46) ಮೃತ ದುರ್ದೈವಿ ಆಗಿದ್ದಾರೆ. ಪರಿಚಯಸ್ಥರೇ ಸೇರಿ ರುಕ್ಕಮ್ಮಳನ್ನು ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಲಾಗಿದೆ.
ಪ್ರಕರಣ ಸಂಬಂಧ ಆರೋಪಿ ಮಾಳಪ್ಪ ಎಂಬಾತನನ್ನು ಬಂಧನ ಮಾಡಲಾಗಿದೆ. ಇದೇ ಮೇ 23ರಂದು 7ನೇ ಮೈಲ್ ಬಳಿಯ ಕಾಲುವೆಗೆ ರುಕ್ಕಮ್ಮಳನ್ನು ತಳ್ಳಿ, ಗಂಭೀರ ಗಾಯಗೊಳಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ರುಕ್ಕಮ್ಮಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರುಕ್ಕಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಒಂಟಿಯಾಗಿದ್ದ ವೃದ್ಧೆಯ ಭೀಕರ ಹತ್ಯೆ; ಗಂಡ ಕಟ್ಟಿದ ಮನೆಯೆಂದು ಮಗನ ಜತೆಗೂ ಹೋಗಿರಲಿಲ್ಲ
ಮೃತಳ ಕುಟುಂಬಸ್ಥರು ಘಟನೆ ಬಳಿಕ ಆರೋಪಿ ಮಾಳಪ್ಪ ಸೇರಿ ಮೂವರ ವಿರುದ್ಧ ದೂರು ನೀಡಿದ್ದರು. ಸದ್ಯ ಆರೋಪಿ ಮಾಳಪ್ಪನನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ