ಹಾಸನ: ಮೊಬೈಲ್ ಪಾರ್ಸಲ್ ನೀಡಲು ಬಂದ ಡೆಲಿವರಿ ಬಾಯ್‌ನನ್ನೇ ಕಿರಾತಕನೊಬ್ಬ ಹತ್ಯೆ (Murder Case) ಮಾಡಿರುವ ಘಟನೆ ಅರಸೀಕೆರೆ ನಗರದಲ್ಲಿ ನಡೆದಿದೆ. ಹೇಮಂತ್ ನಾಯ್ಕ್ (23) ಮೃತ ದುರ್ದೈವಿ.
ಅರಸೀಕೆರೆ ನಗರ ಲಕ್ಷ್ಮೀಪುರದ ಹೇಮಂತ್ ದತ್ತ (20) ಎಂಬಾತ ಈ ಕೃತ್ಯ ಎಸಗಿದ್ದಾನೆ. ಐಫೋನ್ ಆಸೆಗಾಗಿ ಆರೋಪಿ ಹೇಮಂತ್ ದತ್ತ ಆನ್‌ಲೈನ್‌ನಲ್ಲಿ ಮೊಬೈಲ್‌ವೊಂದನ್ನು ಬುಕ್ ಮಾಡಿದ್ದ. ಆದರೆ, ಮೊಬೈಲ್ ಖರೀದಿಗೆ ಹಣ ಇಲ್ಲದ ಕಾರಣಕ್ಕೆ ಪಾರ್ಸಲ್ ನೀಡಲು ಬಂದಿದ್ದ ಡೆಲಿವರಿ ಬಾಯ್ ಹೇಮಂತ್ ನಾಯ್ಕ್‌ನನ್ನು ಹತ್ಯೆ ಮಾಡಿದ್ದಾನೆ. ಫೆ. 7ರಂದು ಅರಸೀಕೆರೆ ನಗರದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂರು ದಿನ ಮನೆಯಲ್ಲೇ ಇತ್ತು ಶವ
ಅರಸೀಕೆರೆ ತಾಲೂಕಿನ ಹಳೆಕಲ್ಲನಾಯಕನಹಳ್ಳಿಯ ಹೇಮಂತ್ ನಾಯ್ಕ್ (23) ಈ ಕಾರ್ಟ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಸೆಕೆಂಡ್ ಹ್ಯಾಂಡ್ ಆ್ಯಪಲ್ ಫೋನ್ ಬುಕ್ ಮಾಡಿದ್ದ ಆರೋಪಿ ಹೇಮಂತ್ ದತ್ತ, ಹಣ ತರುತ್ತೇನೆ ಕುಳಿತುಕೊಳ್ಳಿ ಎಂದು ಹೇಳಿದ್ದಾನೆ. ಒಳ ಹೋಗುವಂತೆ ನಟಿಸಿ ಬಳಿಕ ಹಿಂದಿನಿಂದ ಬಂದು ನಾಯ್ಕ್‌ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆಗ ನಾಯ್ಕನಿಗೆ ತೀವ್ರ ರಕ್ತಸ್ರಾವವಾಗಿ ದತ್ತನ ಮನೆಯಲ್ಲಿ ಜೀವ ಬಿಟ್ಟಿದ್ದ. ಇತ್ತ ಹತ್ಯೆ ಮಾಡಿದ ಬಳಿಕ ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ದತ್ತ ಮೂರು ದಿನಗಳ ಕಾಲ ಮನೆಯಲ್ಲಿಯೇ ಶವವನ್ನು ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.
ಗೋಣಿಚೀಲದಲ್ಲಿ ಮೃತದೇಹವನ್ನು ಸಾಗಿಸಿದ್ದ ಕಿರಾತಕ
ಮೂರು ದಿನಗಳ ಮನೆಯಲ್ಲಿ ಮೃತದೇಹವನ್ನು ಇಟ್ಟುಕೊಂಡು ಬಳಿಕ ಫೆ.11ರಂದು ಹೇಮಂತ್ ನಾಯ್ಕ್ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡಿದ್ದಾನೆ. ಸ್ಕೂಟರ್ ಮೂಲಕ ಅರಸೀಕೆರೆ ನಗರದ ಹೊರ ವಲಯದ ಅಂಚೆ ಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಮೃತ ದೇಹವನ್ನು ಪೆಟ್ರೋಲ್ ಹಾಕಿ ಸುಟ್ಟು ಬಂದಿದ್ದಾನೆ.
ಮೃತದೇಹವನ್ನು ಸ್ಕೂಟಿಯಲ್ಲಿ ಹೊತ್ತು ಸಾಗುವ ಮತ್ತು ಸುಡಲು ಪೆಟ್ರೋಲ್ ಖರೀದಿಸುವ ದೃಶ್ಯವೆಲ್ಲ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಾಪಿ ಕೃತ್ಯಕ್ಕೆ ಏನೂ ಅರಿಯದ ಡೆಲಿವರಿ ಬಾಯ್ ಹೇಮಂತ್ ನಾಯ್ಕ್ ಬಲಿ ಆಗಿದ್ದಾನೆ.
ಇದನ್ನೂ ಓದಿ: Murder Case: ಕೌಟುಂಬಿಕ ಕಲಹ; ಪತ್ನಿಯನ್ನು ಹಾರೆಯಿಂದ ಬರ್ಬರವಾಗಿ ಹತ್ಯೆ ಮಾಡಿದ ಪತಿ ಬಂಧನ
ಸದ್ಯ ಪಾಪಿ ಹೇಮಂತ್ ದತ್ತನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.