ಬೀದರ್/ವಿಜಯಪುರ: ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಯುವಕರ ನಡುವೆ ಜಗಳ ನಡೆದು, ಯುವಕನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಬೀದರ್‌ನ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ನಿವಾಸಿ ಬಸವರಾಜ ಜಮಾದಾರ (30) ಹತ್ಯೆಯಾದವ.
ಕಿಟ್ಟಾ ಗ್ರಾಮದಲ್ಲಿ ಗೆಳೆಯನ ಮದುವೆ ಸಮಾರಂಭ ಇತ್ತು. ಈ ಮದುವೆಗೆ ಬಸವರಾಜ ಹೋಗಿದ್ದ. ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡಲೆಂದು ಈತ ಕಿಟ್ಟಾ ಗ್ರಾಮಕ್ಕೆ ತೆರಳಿದ್ದ. ಮೆರವಣಿಗೆಯಲ್ಲಿ ನೃತ್ಯ ಮಾಡುವಾಗ ಕಿಟ್ಟಾ ಗ್ರಾಮದ ಕೆಲ ಯುವಕರೊಂದಿಗೆ ಜಗಳ ನಡೆದಿದೆ. ಈ ನಡುವೆ ಸ್ಥಳೀಯರು ಮಧ್ಯ ಪ್ರವೇಶಿಸಿ ಎರಡು ಕಡೆಯವರನ್ನು ಸಮಾಧಾನಪಡಿಸಿ ಕಳಿಸಿದ್ದಾರೆ.
ಇದನ್ನೂ ಓದಿ: Road Accident : ಪ್ರತ್ಯೇಕ ಕಡೆಗಳಲ್ಲಿ ಬಸ್ ಅಪಘಾತ; ನರಳಾಡಿದ ಪ್ರಯಾಣಿಕರು
ಆದರೆ ಅಷ್ಟಕ್ಕೆ ಸುಮ್ಮನಾಗದ ಕಿಟ್ಟಾ ಗ್ರಾಮದ ಯುವಕರು, ಬಸವರಾಜನನ್ನು ಮೆರವಣಿಗೆಯಿಂದ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಠಾಣೆ ಸಿಪಿಐ ಕೃಷ್ಣಕುಮಾರ ಪಾಟೀಲ, ಪಿಎಸ್ಐ ವಸೀಮ್ ಪಟೇಲ್ ನೇತೃತ್ವದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆ ಮಾಡಿ ಪರಾರಿಯಾದ ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ
ವಿಜಯಪುರ ನಗರದ ಕೆಎಚ್‌ಬಿ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಲಾಗಿದೆ. ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ದಂಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಲನಗರ ಪಿಎಸ್‌ಐ ಮತ್ತು ಡಿವೈಎಸ್‌ಪಿ ಯಲಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವ್ಯಕ್ತಿಯ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಹೋಂ ಗಾರ್ಡ್ ಬಟ್ಟೆಯಲ್ಲಿ ತುಂಡಾಗಿ ಬಿದ್ದಿರುವ ಶವ ಪತ್ತೆಯಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.